ವಿಜಯಪುರ: ಜಿಲ್ಲಾ ಪಂಚಾಯಿತಿ ಸಿಇಒಗೆ ಕೊರೊನಾ ಸೋಂಕಿದ್ದರೆ ಸಭೆಗೆ ಜಿಲ್ಲಾಧಿಕಾರಿಯನ್ನು ಆಹ್ವಾನಿಸಬೇಕಾಗಿತ್ತು. ಸಭೆಯಲ್ಲಿ ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ಸಭೆ ನಡೆಸುವುದರಲ್ಲಿ ಅರ್ಥವೇ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿ.ಪಂ.ಅಧ್ಯಕ್ಷೆ ಸುಜಾತಾ ಕಳ್ಳಿಮನಿ ನೇತೃತ್ವದಲ್ಲಿ ನಡೆದ 17ನೇ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಜಿ.ಪಂ ಸಿಇಒ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಗೊತ್ತಾದ ಮೇಲೆ ಸಭೆಗೆ ಜಿಲ್ಲಾಧಿಕಾರಿಯನ್ನು ಸಭೆಗೆ ಆಹ್ವಾನಿಸಬೇಕೆಂದು ಮನವಿ ಮಾಡಿದ್ದರೂ ಅವರನ್ನು ಕರೆಸಿಲ್ಲ. ಇಲ್ಲಿ ನಡೆಯುವ ಚರ್ಚೆ, ಸಲಹೆ, ಸೂಚನೆ ಹಾಗೂ ಸಮಸ್ಯೆ ಯಾರು ಪರಿಹರಿಸುತ್ತಾರೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ, ಸಿಇಒ ಅವರಿಗೆ ಕೊರೊನಾ ಇರುವ ಕಾರಣ ಅವರ ನಿರ್ದೇಶನದ ಮೇಲೆ ಸಾಮಾನ್ಯ ಸಭೆ ನಡೆಸಲಾಯಿತು. ಇಲ್ಲಿ ನಡೆಯುವ ಎಲ್ಲ ವಿಷಯಗಳನ್ನು ಅವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾವುದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿ.ಪಂ.ಮಾಜಿ ಅಧ್ಯಕ್ಷ ಶಿವಯೋಗಿ ನೆದಲಗಿ, ಸದ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಅಧಿಕಾರಿಯಾಗಿ ಬಂದಿರುವ ಕಾರಣ ನೀವೇ ಸುಪ್ರೀಂ ಇದ್ದ ಹಾಗೆ. ಸಿಇಒ ಅವರನ್ನು ಕೇಳಿ ಸಮಸ್ಯೆ ಏಕೆ ಬಗೆಹರಿಸುತ್ತೀರಿ? ನೀವೇ ನಿರ್ಧಾರ ಕೈಗೊಳ್ಳಿ ಎಂದು ಆಗ್ರಹಿಸಿದರು. ನಂತರ ವಿವಿಧ ಯೋಜನೆಗಳ ಅನುದಾನಕ್ಕೆ ಸರ್ವ ಸದಸ್ಯರು ಅನುಮೋದನೆ ನೀಡಿದರು.
ಠರಾವು ಪಾಸ್: ಜಿಲ್ಲೆಯಲ್ಲಿ ತಳವಾರ ಹಾಗೂ ಪರಿವಾರ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿದ ಜಿ.ಪಂ.ಸರ್ವ ಸದಸ್ಯರು ಶೀಘ್ರ ತಳವಾರ ಹಾಗೂ ಪರಿವಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಠರಾವು ಪಾಸ್ ಮಾಡಿದರು. ಸಭೆ ಆರಂಭಕ್ಕೆ ಮುನ್ನ ಕೇಂದ್ರ ಸಚಿವ ದಿ. ಸುರೇಶ ಅಂಗಡಿ, ರಾಜ್ಯ ಸಭಾ ಸದಸ್ಯ ಅಶೋಕ ಗಸ್ತಿ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.