ವಿಜಯಪುರ: ಉಕ್ರೇನ್- ರಷ್ಯಾ ಯುದ್ಧ ಹಾಗೂ ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಆತಂಕದ ಕಾರಣ ಎರಡು ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಸಾವಿರಾರು ಭಾರತೀಯ ಮೂಲದ ವಿದ್ಯಾರ್ಥಿಗಳು ವಾಪಸ್ ಆಗಿದ್ದು, ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದರು. ಸದ್ಯ ಮಾಜಿ ಸಚಿವ ಎಂ.ಬಿ.ಪಾಟೀಲ ಒಡೆತನದ ಬಿಎಲ್ಡಿಇ ವೈದ್ಯಕೀಯ ಕಾಲೇಜು ಅವರ ನೆರವಿಗೆ ಬಂದಿದೆ. ಆನ್ಲೈನ್ನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಆಶಾಭಾವನೆ ಮೂಡಿದೆ.
ಕಡಿಮೆ ವೆಚ್ಚದಲ್ಲಿ ವೈದ್ಯರಾಗಬೇಕು ಎಂದು ಕನಸು ಕಂಡು ದೇಶದ ನಾನಾ ಭಾಗದಿಂದ ವಿದ್ಯಾರ್ಥಿಗಳು ಉಕ್ರೇನ್ ಮತ್ತು ಚೀನಾ ದೇಶಗಳಿಗೆ ಉನ್ನತ ವ್ಯಾಸಂಗ ಮಾಡಲು ತೆರಳಿದ್ದರು. ಆದರೆ, ಈ ವರ್ಷ ಉಕ್ರೇನ್ ರಷ್ಯಾ ಸಂಘರ್ಷ ಹಿನ್ನೆಲೆ ವಿದ್ಯಾರ್ಥಿಗಳು ತವರು ದೇಶಕ್ಕೆ ಮರಳಿದ್ದಾರೆ. ಅದೇ ರೀತಿ ಚೀನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದಾಗ ಚೀನಾ ತೊರೆದು ವಾಪಸ್ ಭಾರತಕ್ಕೆ ಬಂದ ಮೇಲೆ ಭಾರತ ಸರ್ಕಾರ ಚೀನಾಗೆ ತೆರಳದಂತೆ ವೀಸಾ ರದ್ದುಗೊಳಿಸಿತ್ತು.
ಅತಂತ್ರ ಸ್ಥಿತಿಯಲ್ಲಿದ್ದ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳು ಬಿಎಲ್ಡಿಇ ಡೀಮ್ಡ್ ವೈದ್ಯಕೀಯ ಕಾಲೇಜು ಮುಖ್ಯಸ್ಥ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು. ತಕ್ಷಣ ಇವರ ನೆರವಿಗೆ ಬಂದ ಪಾಟೀಲರು ಈ ವಿದ್ಯಾರ್ಥಿಗಳನ್ನು ಬಾಹ್ಯ ವಿದ್ಯಾರ್ಥಿಗಳೆಂದು ಪರಿಗಣಿಸಿ ಅವರಿಗೆ ಶಿಕ್ಷಣ ನೀಡುವಂತೆ ಕಾಲೇಜು ಡೀನ್ ಅವರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಈಗ ಅದೇ ಕಾಲೇಜಿನಲ್ಲಿ ಬೋಧನೆ ಮತ್ತು ಪ್ರಾಯೋಗಿಕ ಅವಕಾಶ ನೀಡಿದ್ದಾರೆ.
ಸದ್ಯ ವಿಜಯಪುರ ಬಿಎಲ್ಡಿಇ ವೈದ್ಯಕೀ ಯ ಕಾಲೇಜಿನಲ್ಲಿ ಉಕ್ರೇನ್ದಿಂದ ಬಂದ ಕರ್ನಾಟಕ ಹಾಗೂ ಬೇರೆ ರಾಜ್ಯದ ಒಟ್ಟು 62 ವಿದ್ಯಾರ್ಥಿಗಳು ಹಾಗೂ ಚೀನಾದಿಂದ ಬಂದ 12 ವಿದ್ಯಾರ್ಥಿಗಳು ಬಾಹ್ಯ ವಿದ್ಯಾರ್ಥಿಗಳಾಗಿ ಶಿಕ್ಷಣ ಮುಂದುವರೆಸಿದ್ದಾರೆ. ಇವರಿಗೆ ಉಚಿತ ಗ್ರಂಥಾಲಯ ವ್ಯವಸ್ಥೆ, ತಜ್ಞ ಉಪನ್ಯಾಸಕರ ಮೂಲಕ ಕಲಿಕೆಗೆ ಅವಕಾಶ ನೀಡಲಾಗಿದೆ. ಬೇರೆ ರಾಜ್ಯದಿಂದ ಬಂದವರಿಗೆ ವಸತಿ ನಿಲಯದ ಅವಕಾಶ ಕಡಿಮೆ ವೆಚ್ಚದಲ್ಲಿ ಕಲ್ಪಿಸಿದ್ದಾರೆ. ಈ ರೀತಿ ಶಿಕ್ಷಣ ದೊರೆಯುತ್ತಿರುವ ಬಗ್ಗೆ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದ್ದಂತೆ ಹೊರ ರಾಜ್ಯದ ವಿದ್ಯಾರ್ಥಿಗಳು ಸಹ ಬರುತ್ತಿದ್ದಾರೆ.
ಉಕ್ರೇನ್ ಹಾಗೂ ಚೀನಾದಿಂದ ಬಂದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಕೇಂದ್ರ ಹಾಗೂ ಆಯಾ ರಾಜ್ಯಗಳ ಸರ್ಕಾರ ಭರವಸೆ ನೀಡಿತ್ತು. ಆದರೆ, ನಂತರ ಅದನ್ನು ಮರೆತೆ ಬಿಟ್ಟಿತ್ತು. ಈಗ ವಿಜಯಪುರದ ಖಾಸಗಿ ವೈದ್ಯಕೀಯ ಕಾಲೇಜು ಮಂಡಳಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ನೆರವಿಗೆ ಬಂದಿರುವುದು ಶ್ಲಾಘನೀಯ.
ಇದನ್ನೂ ಓದಿ: ಉಕ್ರೇನ್ನಲ್ಲಿ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಂ.ಬಿ.ಪಾಟೀಲ ನೆರವು