ವಿಜಯಪುರ: ಹಬ್ಬಗಳ ಆರಂಭಕ್ಕೆ ಮುನ್ನುಡಿ ಬರೆಯುವ ಶ್ರಾವಣ ಮಾಸ ಆರಂಭಗೊಂಡಿದೆ. ಸುಮಂಗಲಿಯರು ಈ ಮಾಸದಲ್ಲಿ ನಡೆಸುವ ವಿವಿಧ ರೀತಿಯ ಪೂಜೆ- ಪುನಸ್ಕಾರಕ್ಕೆ ಈ ವರ್ಷ ಕೊಂಚ ಬ್ರೇಕ್ ಬಿದ್ದಿದೆ.
ಶ್ರಾವಣ ಮಾಸ ಆಚರಣೆಗೆ ಕೆಲ ನಿಬಂಧನೆ ಹೇರಿ ಹಲವು ಗ್ರಾಮದಲ್ಲಿ ಡಂಗೂರ ಹೊರಡಿಸಿರುವ ವಿಡಿಯೋಗಳು ಈಗ ವೈರಲ್ ಆಗಿವೆ. ಈ ಒಂದು ತಿಂಗಳ ಕಾಲ ನಿತ್ಯ ಪೂಜಾರಿ, ಸ್ವಾಮೀಜಿಗಳು ಮನೆ ಮನೆಗೆ ತೆರಳಿ ಪತ್ರಿ ನೀಡುತ್ತಾರೆ. ಈ ವೇಳೆ ಮಹಿಳೆಯರು ಅವರ ಪಾದಪೂಜೆ ನೆರವೇರಿಸಿ ಪತ್ರಿ ಸ್ವೀಕರಿಸುವ ಸಂಪ್ರದಾಯವಿದೆ. ಆದರೆ ಕೊರೊನಾ ಭೀತಿಯಿಂದ ಸಾಮಾಜಿಕ ಅಂತರ ಕಾಪಾಡಲು ಸ್ವಾಮೀಜಿ, ಪೂಜಾರಿಗಳು ಮನೆಯೊಳಗೆ ಬರದೇ ಗೇಟ್ನಲ್ಲಿಯೇ ಪತ್ರಿ ಹಾಕುವ ವಿಚಿತ್ರ ಸನ್ನಿವೇಶ ಒದಗಿ ಬಂದಿದೆ.
ಈ ಪತ್ರಿ ನೀಡುವ ಸ್ವಾಮೀಜಿಗಳು ಕೊರೊನಾ ಕಾರಣದಿಂದ ಯಾರ ಮನೆಯೊಳಗೆ ಹೋಗುವುದಾಗಲಿ, ಪಾದ ಪೂಜೆ ಮಾಡಿಸಿಕೊಳ್ಳುವುದಾಗಲಿ, ಆಹಾರ ಸ್ವೀಕರಿಸುವುದಾಗಲಿ ಮಾಡುತ್ತಿಲ್ಲ. ಬದಲಿಗೆ ದೂರದಲ್ಲೇ ಪೂಜೆ ನೆರವೇರಿಸಿ ಮರಳುತ್ತಿದ್ದಾರೆ.
ತಿಂಗಳು ಪೂರ್ತಿ ನಡೆಯುವ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಹಾಗೂ ಶುಕ್ರವಾರ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸುವುದು, ನೆಂಟರಿಸ್ಟರನ್ನು ಮನೆಗೆ ಕರೆದು ಹಬ್ಬದೂಟ ಮಾಡಿಸುವುದು ರೂಢಿದತ ಸಂಪ್ರದಾಯ. ಆದರೆ ಈ ವರ್ಷ ಮಾತ್ರ ಕೊರೊನಾ ವೈರಸ್ ಅಡ್ಡಿಪಡಿಸಿದೆ.