ವಿಜಯಪುರ: ಕೊರೊನಾ ಬಾಧಿತ ರಾಜ್ಯ ಮತ್ತು ಜಿಲ್ಲೆಗಳಿಂದ ಮರಳಿರುವ 36,000 ಜನರನ್ನು ತೀವ್ರ ನಿಗಾದಲ್ಲಿಟ್ಟು ಹೋಮ್ ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತದ ಕ್ರಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಕೈಗೊಂಡಿರುವ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಗೆ ವಿದೇಶದಿಂದ ಮರಳಿರುವವರ ಜೊತೆಗೆ ಕೊರೊನಾ ಸೋಂಕು ಬಾಧಿತ ಜಿಲ್ಲೆ ಮತ್ತು ರಾಜ್ಯಗಳಿಂದ ಮರಳಿರುವ ಸುಮಾರು 36 ಸಾವಿರ ಜನರನ್ನು ಗುರುತಿಸಿ ಹೋಮ್ ಕ್ವಾರಂಟೈನ್ ಮಾಡಿರುವುದು ರಾಜ್ಯದ ಏಕೈಕ ಜಿಲ್ಲೆ ವಿಜಯಪುರವಾಗಿದೆ. ಪ್ರಾಯೋಗಿಕವಾಗಿ ಮಾಡಿರುವ ಈ ಕಾರ್ಯವು ರಾಜ್ಯದ ಜೊತೆಗೆ ಭಾರತದ ಇತರೆ ರಾಜ್ಯಗಳಿಗೂ ಮಾದರಿ ಎಂದಿದ್ದಾರೆ.
ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿಶೇಷವಾಗಿ ಕೊರೊನಾ ಬಾಧಿತ ಜಿಲ್ಲೆ ಮತ್ತು ರಾಜ್ಯಗಳ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ದೆಹಲಿಯ ಸಾಮೂಹಿಕ ಪ್ರಾರ್ಥನೆಯಿಂದ ಮರಳಿರುವವರನ್ನು ಸಾರ್ವಜನಿಕರಿಂದ ಮಾಹಿತಿ ಇಲ್ಲದೆ ಜಿಲ್ಲಾಡಳಿತವೇ ನೇರವಾಗಿ ಗುರುತಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ತಿಳಿಸಿದ ಅವರು, ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಪೂರೈಕೆ, ಅಲೆಮಾರಿ ಜನಾಂಗಗಳಿಗೆ ಆಹಾರ ಧಾನ್ಯ ಮತ್ತು ಇತರೆ ವಸ್ತುಗಳ ಕಿಟ್‍ಗಳನ್ನು ವಿತರಿಸುತ್ತಿರುವುದು ಮತ್ತು ಪಡಿತರ ಧಾನ್ಯಗಳ ಸಮರ್ಪಕ ಪೂರೈಕೆ ಕ್ರಮಗಳು ಜನರಿಗೆ ನೆರವಾಗಲಿವೆ. ಜಿಲ್ಲೆಯಾದ್ಯಂತ ಲಾಕ್‍ಡೌನ್ ಮತ್ತು ನಿಷೇಧಾಜ್ಞೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾದರೂ ಗುರುತಿನ ಚೀಟಿ ವಿತರಣಾ ಪ್ರಕ್ರಿಯೆ ಮತ್ತು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಿಂದ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ 50 ಜನರ ಗಂಟಲು ದ್ರವ ಮಾದರಿಯಲ್ಲಿ 48 ನೆಗೆಟಿವ್ ಬಂದಿದೆ. ಇನ್ನೂ ಇಬ್ಬರ ವೈದ್ಯಕೀಯ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾಹಿತಿ ನೀಡಿದರು.