ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಢವಳಗಿ ಕಸ್ತೂರ ಬಾ ಬಾಲಿಕಾ ವಸತಿ ಶಾಲೆಯಲ್ಲಿ ಕೋವಿಡ್ ಪಾಸಿಟಿವ್ ಕೇಸ್‌ಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಮತ್ತೆ ಎಂಟು ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ಶಾಲೆಗೆ ರಜೆ ಘೋಷಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಜಿ. ಮಿರ್ಜಿ ತಿಳಿಸಿದ್ದಾರೆ.
ಈ ಕುರಿತು ತಮ್ಮನ್ನು ಸಂಪರ್ಕಿಸಿದ ಮಾಧ್ಯಮದವರೊಂದಿಗೆ ಮಾತನಾಡಿ ಅವರು, 12 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು. ಈಗ ಮತ್ತೆ ಎಂಟು ಜನಕ್ಕೆ ಬಂದಿದ್ದು, ಒಟ್ಟು 20 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ತಗುಲಿದೆ. ಆದರೆ, ಲಕ್ಷಣಗಳು ಸಾಮಾನ್ಯವಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಒಂದು ವಾರ ಕಾಲ ಆ ಶಾಲೆಗೆ ರಜೆ ಘೋಷಿಸಿದ್ದೇವೆ. ಇನ್ನುಳಿದಂತೆ ಐದಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, ತಾಲೂಕಿನ ತುಂಬಗಿ ಪರಮಾನಂದ ಪ್ರೌಢಶಾಲೆ, ತಾಳಿಕೋಟಿ ಎಂ.ಜಿ.ಎಂ.ಕೆ ಶಾಲೆಗೆ ರಜೆ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಳಿಕೋಟಿ ಎಂ.ಜಿ.ಎಂ.ಕೆ ಶಾಲೆಯಲ್ಲಿ ಕೋವಿಡ್ ಪಾಸಿಟಿವ್ ಕೇಸ್‌ಗಳು ಕಂಡು ಬಂದು ಆರು ದಿನಗಳಾಗಿದ್ದು, ಶಾಲೆ ತೆರೆಯುವಂತೆ ತಿಳಿಸಲಾಗಿದೆ ಎಂದು ಬಿಇಓ ಮಿರ್ಜಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಕೆಮ್ಮು, ಜ್ವರ, ನೆಗಡಿ ಲಕ್ಷಣ ಹೊಂದಿರುವ ಮಕ್ಕಳಿದ್ದರೆ ಶಾಲೆಯಿಂದ ವಾಪಸ್ ಕಳಿಸುವಂತೆ ಆಯಾ ಶಾಲೆಯ ಮುಖ್ಯಗುರುಗಳಿಗೆ ತಿಳಿಸಲಾಗಿದೆ ಎಂದರು.
ಓದಿ: ರಾಜ್ಯದಲ್ಲಿಂದು 34,047 ಮಂದಿಗೆ ಕೊರೊನಾ, ಸೋಂಕಿನಿಂದ 13 ಸಾವು: ಪಾಸಿಟಿವಿಟಿ ರೇಟ್ ಶೇ.19..!