ವಿಜಯಪುರ: "ಕಾಂಗ್ರೆಸ್ ನಡೆಸುತ್ತಿರುವ ಪ್ರಜಾಧ್ವನಿ ರಥಯಾತ್ರೆಗೆ ಜನ ಸೇರಿಸಲು ಬಬಲೇಶ್ವರ ಕ್ಷೇತ್ರದಲ್ಲಿ ಮುಖಂಡರು ಮಹಿಳೆಯರಿಗೆ ಸೀರೆ, ಮೊಬೈಲ್ ಹಂಚುತ್ತಾ ಆಮಿಷ ಒಡ್ಡುತ್ತಿದ್ದಾರೆ" ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, "ಪ್ರಜಾಧ್ವನಿ ಹೆಸರಿನಲ್ಲಿ ರಥಯಾತ್ರೆ ನಡೆಸಿ ಹಣ ಸುರಿಯುತ್ತಿದ್ದಾರೆ. ಆದರೆ ಜನ ಇಂಥ ಆಮಿಷಕ್ಕೆ ಬಲಿಯಾಗುವುದಿಲ್ಲ. ಈ ಬಾರಿ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ ಅವರನ್ನು ಜನರು ಸೋಲಿಸುತ್ತಾರೆ. ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ" ಎಂದರು.
"ನಾನು ಬಬಲೇಶ್ಚರ ಕ್ಷೇತ್ರದಿಂದ ಮೂರು ಬಾರಿ ಸೋತಿರಬಹುದು. ಆದರೆ ಆ ಸೋಲಿನ ಹಿಂದೆ ಯಾವ ರೀತಿಯ ತಂತ್ರಗಾರಿಕೆ ಇದೆ ಎನ್ನುವುದು ಕ್ಷೇತ್ರದ ಮತದಾರರಿಗೆ ಗೊತ್ತಿದೆ. ಈ ಬಾರಿ ಜನ ಈ ರೀತಿ ಸೀರೆ, ಮೊಬೈಲ್ ಹಂಚಿದರೆ ಅದಕ್ಕೆ ಬಲಿಯಾಗುವುದಿಲ್ಲ. ಇನ್ನೂ ಸಾಕಷ್ಟು ಆಮಿಷ ಒಡ್ಡಲು ಕಾಂಗ್ರೆಸ್ ಮುಖಂಡರು ತಯಾರಿ ನಡೆಸುತ್ತಿದ್ದಾರೆ. ಮೊನ್ನೆ ಹಿಟ್ಟಿನ ಯಂತ್ರ ನೀಡಿದ್ದಾರೆ. ಅದರ ಮೇಲೆ ಅವರ ಅಣ್ಣ ತಮ್ಮಂದಿರ ಪೋಟೋ ಇದ್ದವು. ಅದನ್ನೂ ಸಹ ಅವರು ನಿರಾಕರಿಸಿ ತಮ್ಮ ಫೋಟೋ ಬಳಸಿ ಹಂಚಿದ್ದಾರೆ. ಅದಕ್ಕೂ ಕಾಂಗ್ರೆಸ್ಗೂ ಸಂಬಂಧವಿಲ್ಲ ಎಂದು ಸಮಜಾಯಿಸಿ ಬೇರೆ ನೀಡಿದ್ದಾರೆ" ಎಂದು ಹೇಳಿದರು.
"ಈ ಕಾಂಗ್ರೆಸ್ ಶಾಸಕ ತಮ್ಮ ರಾಜಕೀಯಕ್ಕಾಗಿ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳನ್ನು ಬಳಸಿಕೊಂಡಿದ್ದಾರೆ. ಸಿದ್ದೇಶ್ವರ ಶ್ರೀಗಳ ಬಗ್ಗೆ ವಿಶ್ವದೆಲ್ಲೆಡೆ ದೊಡ್ಡ ಅಭಿಮಾನಿ ಬಳಗವಿದೆ. ಇತ್ತೀಚಿಗೆ ಅವರು ಲಿಂಗೈಕ್ಯರಾದ ಮೇಲೆ ಪ್ರತಿ ಮನೆಯಲ್ಲಿ ಅವರ ಫೋಟೋ ಹಾಕಿ ಪೂಜೆ ಮಾಡುತ್ತಾರೆ. ಅಂಥ ದೈವ ಮಾನವನನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.
ಸುನೀಲ್ ಗೌಡ ತಿರುಗೇಟು: ಬಿಜೆಪಿ ಮುಖಂಡ ವಿಜುಗೌಡ ಪಾಟೀಲರು ಶಾಸಕ ಎಂ.ಬಿ.ಪಾಟೀಲ ವಿರುದ್ಧ ಮಾಡಿರುವ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕರ ಸಹೋದರ ಹಾಗೂ ಅವಳಿ ಜಿಲ್ಲೆ ವಿಧಾನಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ, "ಬಿಜೆಪಿಯ ಬೆನ್ನು ಹತ್ತಿದವರು ಯಾರೂ ಉದ್ಧಾರವಾಗಿಲ್ಲ. ಅವರನ್ನು ಬೆಂಬಲಿಸಿ ಹಾಳಾದವರ ಪಟ್ಟಿ ನನ್ನ ಬಳಿ ಇದೆ" ಎಂದು ಕುಟುಕಿದರು. ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಬಿಜೆಪಿ ದೌರ್ಜನ್ಯ ಮತ್ತು ಗೂಂಡಾಗಿರಿಯಿಂದ ಬೇಸತ್ತು ಕಾಂಗ್ರೆಸ್ಗೆ ಸೇರ್ಪಡೆಯಾದ ಹೊನವಾಡದವರ ವಸ್ತಿಯ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.
ಸಮಯ ಬಂದಾಗ ಬಿಡುಗಡೆ: "ಗ್ರಾ.ಪಂ ಚುನಾವಣೆಯಲ್ಲಿ ಇವರಿಂದ ಬೆಂಬಲ ಪಡೆದು ಪರಾಜಿತರಾದ ಅಭ್ಯರ್ಥಿಗಳು ಸಾಲಗಾರರಾಗಿದ್ದಾರೆ. ಆದರೆ, ಇವರು ಮಾತ್ರ ಮೂರು ಚುನಾವಣೆಗೆ ಸ್ಪರ್ಧಿಸಿದ ನಂತರವೂ ಹೊಸದಾಗಿ ಹೊಲ ಖರೀದಿ ಮಾಡುತ್ತಿದ್ದಾರೆ. ದೊಡ್ಡ ವಾಹನ ಖರೀದಿಸುತ್ತಿದ್ದಾರೆ. ಇವರ ಮಕ್ಕಳು ರೂ. 50 ಲಕ್ಷ ಮೌಲ್ಯದ ಬೈಕ್ ಖರೀದಿಸುತ್ತಾರೆ. ಬಿಜೆಪಿ ಕಾರ್ಯಕರ್ತರು ಯಾರಾದರೂ ರೂ. 20 ಲಕ್ಷ ಮೌಲ್ಯದ ಬೈಕ್ ಖರೀದಿಸಿದ್ದೀರಾ? ಇಂದು ಬಿಜೆಪಿ ಕಾರ್ಯಕರ್ತರ ಪರಿಸ್ಥಿತಿ ಏನಾಗಿದೆ? ಕಾರ್ಯಕರ್ತರ ಕಡೆಯಿಂದ ಇವರು ದೇಣಿಗೆ ಸಂಗ್ರಹಿಸುತ್ತಾರೆ. ಬಂದ ಹಣದ ಜೊತೆಗೆ ಪಾರ್ಟಿ ಫಂಡ್ ಕೂಡ ಇಟ್ಟುಕೊಂಡು ದೊಡ್ಡ ವಾಹನ, ಹೊಲ, ಆಸ್ತಿ ಖರೀದಿ ಮಾಡುತ್ತಾ ಹೋಗುತ್ತಾರೆ. ಇದರ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ" ಎಂದು ಹೇಳಿದರು.
"ನಿಮ್ಮ ಕಡೆಯಿಂದ ಒಳ್ಳೆಯ ಕೆಲಸ ಮಾಡುವ ಯೋಗ್ಯತೆ ಇಲ್ಲದಿದ್ದರೆ, ಜನರಿಗೆ ಕೆಡುಕನ್ನು ಮಾಡಬೇಡಿ, ಕಡೇ ಪಕ್ಷ ಸುಮ್ಮನಿರಿ. ಅದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಪಡಿಸಬೇಡಿ. ಸಮಾಜ ಸೇವೆ ಮಾಡುತ್ತೇವೆ. ಒಳ್ಳೆಯದನ್ನು ಮಾಡುತ್ತೇವೆ ಎಂದು ಪೋಸು ಕೊಡುವುದನ್ನು ನಿಲ್ಲಿಸಿ. ಈಗ ಬಾಬಾನಗರ ಶಾಂತವಾಗಿದೆ. ಎಲ್ಲ ಕಡೆ ನೀರು ಬಂದಿದೆ. ರೈತರು ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಇಂಥ ವಿರೋಧಿಗಳಿಗೆ ಮತ ಹಾಕಿದರೆ ನೀವೆಲ್ಲರೂ ಪೊಲೀಸ್ ಠಾಣೆಗಳಿಗೆ ಅಲೆದಾಡಬೇಕಾಗುತ್ತದೆ. ಈ ಹಿಂದೆ ನಡೆದ ಜಗಳ, ಹೊಡೆದಾಟದಂಥ ಘಟನೆಗಳು ಮರುಕಳಿಸುತ್ತವೆ. ದಿನವಿಡೀ ಪೊಲೀಸ್ ಠಾಣೆಯ ಎದುರೇ ಇರಬೇಕಾಗುತ್ತದೆ. ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತಾಗುತ್ತದೆ. ಇಂಥ ಗೂಂಡಾಗಳನ್ನು ದೂರವಿಟ್ಟು ಒಳ್ಳೆಯವರಿಗೆ ಮತ ನೀಡಿದರೆ ನೆಮ್ಮದಿಯ ಬದುಕು ನಿಮ್ಮದಾಗುತ್ತದೆ. ಬಾಬಾನಗರ ತಮ್ಮ ತವರುಮನೆ ಎಂದು ಈ ಹಿಂದೆ ಹೇಳುತ್ತಿದ್ದರು. ಈಗ ಅವರ ತವರು ಮನೆ ಬೇರೆಯದಾಗಿದೆ" ಎಂದು ಲೇವಡಿ ಮಾಡಿದರು.
"ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಂಚಿದರೆ, ಮತಕ್ಷೇತ್ರದ ಬಡಜನರನ್ನು ನಿಮಗೆ ಸ್ಕೂಲ್ ಬ್ಯಾಗ್ ಖರೀದಿಸಲು ಯೋಗ್ಯತೆ ಇಲ್ಲವೇ ಎಂದು ಬಿಜೆಪಿಯವರು ಹಿಯಾಳಿಸುತ್ತಾರೆ ಎಂದು ಟೀಕಿಸಿದ ಸುನೀಲಗೌಡ ಪಾಟೀಲ, ಬಿಜೆಪಿಯವರೇ ನಿಮಗೆ ಅದನ್ನು ಕೊಡುವ ಯೋಗ್ಯತೆ ಇಲ್ಲ. ಜನರನ್ನು ದಾರಿ ತಪ್ಪಿಸುವುದೇ ನಿಮ್ಮ ಕೆಲಸ" ಎಂದು ವಾಗ್ದಾಳಿ ನಡೆಸಿದರು. "ನೀರಾವರಿ ಯೋಜನೆಗಳಿಂದ ಗ್ರಾಮ, ಅಡವಿ ವಸ್ತಿಗಳು ಅಭಿವೃದ್ಧಿಯಾಗುತ್ತಿದ್ದರೇ ಅವರು ಇದೇ ಪ್ರದೇಶಗಳಿಗೆ ಬಂದು ಮದ್ಯದ ಅಂಗಡಿ ಹಾಕಲು ಮುಂದಾಗುತ್ತಾರೆ. ಈ ಮೂಲಕ ತಾಳಿ ಕಿತ್ತುಕೊಳ್ಳುವ ಕೆಲಸವನ್ನು ಅವರು ಮಾಡುತ್ತಾರೆ. ಕುಡಿತದಿಂದಾಗಿ ಬಹಳಷ್ಟು ಕುಟುಂಬಗಳು ಹಾಳಾಗಿವೆ. ಎಷ್ಟೋ ಒಳ್ಳೆಯ ಮನೆತನಗಳೂ ಬೀದಿಗೆ ಬಂದಿವೆ. ಮದ್ಯ ಮಾರಾಟ ಬಿಟ್ಟರೆ ನೀವು ಬೇರೆ ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದೀರಾ? ಇವರು ಒಂದಾದರೂ ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ಸಾಬೀತು ಪಡಿಸಿದರೆ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಸುನೀಲಗೌಡ ಪಾಟೀಲ ಸವಾಲು ಹಾಕಿದರು.
ಇದನ್ನೂ ಓದಿ: ಕಾಂಗ್ರೆಸ್ ಅತೀ ಭ್ರಷ್ಟ ಸರ್ಕಾರ ನೀಡಿತ್ತು, ತನಿಖೆಯಾಗದ ಎಲ್ಲಾ ಪ್ರಕರಣ ಲೋಕಾಯುಕ್ತಕ್ಕೆ ಶಿಫಾರಸು: ಸಿಎಂ ಘೋಷಣೆ