ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮತ್ತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಸಮಾಧಾನ ಹೊರ ಹಾಕಿದ್ದಾರೆ.
ಬುಧವಾರ ಜಿಲ್ಲಾ ಪಂಚಾಯತ್ ಸಂಭಾಂಗಣದಲ್ಲಿ ಸಚಿವ ಆರ್.ಅಶೋಕ್ ನೇತ್ವತೃದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತ್ತೆ ಪ್ರವೇಶಿಸಿ ಮಾತನಾಡಿದ ಅವರು, ಕಂದಾಯ ಸಚಿವ ಆರ್.ಅಶೋಕ್ ಎದುರು ಸಿಎಂ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಮಹಾನಗರ ಪಾಲಿಕೆಗೆ 125 ಕೋಟಿ ರೂಪಾಯಿ ಬಂದಿತ್ತು. ಆದರೆ ಕೋವಿಡ್ ಹೆಸರಲ್ಲಿ ಸಿಎಂ ಬಿಎಸ್ವೈ ಅದನ್ನು ಹಿಂಪಡೆದಿದ್ದಾರೆ. ಇದು ಇವರು ಕೊಟ್ಟ ಹಣವಲ್ಲ. ಹಿಂದಿನ ಸಿಎಂ ನೀಡಿದ್ದ ಅನುದಾನವಾಗಿತ್ತು. ಸಿಎಂ ಬಿಎಸ್ವೈ ಅನುದಾನದ ತಡೆ ಹಿಡಿದಿರುವುದು ಅಸಮಾಧಾನ ತಂದಿದೆ ಎಂದು ಕಿಡಿಕಾರಿದರು.
ಹಿಂದಿನ ಸಿಎಂ ಕೊಟ್ಟಿದ್ದನ್ನು ಈ ಸಿಎಂ ಕಿತ್ತುಕೊಂಡಿದ್ದಾರೆ ಎಂದು ನೇರವಾಗಿ ಸಿಎಂ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು. ಇಂದು ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತ್ಯಕ್ಷರಾಗಿ, ಕಂದಾಯ ಸಚಿವರ ಎದುರು ಸಿಎಂ ಮೇಲಿನ ಮುನಿಸು ಹೊರ ಹಾಕಿದರು.
ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಮಳೆ ಹಾನಿಯ ಕುರಿತು ಆಲಮಟ್ಟಿಯಲ್ಲಿ ಸಿಎಂ ಸಭೆ ಕರೆದಿದ್ದರು. ಆದರೆ ಅದಕ್ಕೂ ಸಹ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೈರಾಗಿದ್ದರು.