ವಿಜಯಪುರ/ಯಾದಗಿರಿ/ಬಳ್ಳಾರಿ: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಹಾಗೂ ದೆಹಲಿಯಲ್ಲಿ ಪ್ರತಿಭಟನಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಹಲ್ಲೆಯನ್ನು ಖಂಡಿಸಿ ವಿಜಯಪುರ,ಯಾದಗಿರಿ, ಬಳ್ಳಾರಿಯಲ್ಲಿಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ವಿಜಯಪುರ ನಗರದ ಜಮ್ಮಾ ಮಸೀದಿಯಿಂದ ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ಕೈಗೊಂಡ ಎಂಎಂಸಿ ಸಂಘಟನೆ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ದೇಶದಲ್ಲಿ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಮೊದಲು ಕೇಂದ್ರ ಸರ್ಕಾರ ಆರ್ಥಿಕತೆಯನ್ನು ಸುಧಾರಿಸಿಬೇಕು ಯುವಕರಿಗೆ ಉದ್ಯೋಗ ಹೆಚ್ಚಿಸುವ ಕಾರ್ಯ ಮಾಡಲಿ. ಭಾರತದಲ್ಲಿ ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತವಾಗಿದ್ದು, ತಕ್ಷಣವೇ ಪೌರತ್ವ ಕಾಯ್ದೆ ಎನ್ಆರ್ಸಿ ಕಾಯ್ದೆಯನ್ನ ರದ್ದು ಪಡಿಸುವಂತೆ ಅಗ್ರಹಿಸಿದ್ರು.
ಪ್ರತಿಭಟನಾನಿರತ ದೆಹಲಿಯ ಜಾಮಿಯಾ ಇಸ್ಲಾಮಿಯಾ ವಿವಿ ಹಾಗೂ ಅಲಿಘಡ್ ಮುಸ್ಲಿಂ ವಿವಿಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯನ್ನ ಖಂಡಿಸಿ ಯಾದಗಿರಿಯಲ್ಲಿ AIDSO ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಿಂಸಾಚಾರದ ಹಿಂದಿರುವ ಘಾತುಕ ಶಕ್ತಿಗಳನ್ನು ಪತ್ತೆಹಚ್ಚುವ ಮೂಲಕ ಕೇಂದ್ರ ಸರ್ಕಾರ ಇಂತಹ ಮಾರಾಣಾಂತಿಕ ಹಲ್ಲೆ ತಡೆಗಟ್ಟಬೇಕು. ಗುಂಡಿನ ದಾಳಿ ನಡೆಸಿದ ಪೊಲೀಸರು ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾನಿರತರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಬಳ್ಳಾರಿಯ ರಾಯಲ್ ವೃತ್ತದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ನೇತೃತ್ವದಲ್ಲಿ ಪ್ರತಿಭಟನಾನಿರತ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹಾಗೂ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೇಲೆ ಡಿಸೆಂಬರ್ 15ರಂದು ಪೊಲೀಸರು ನಡೆಸಿರುವ ಗುಂಡಿನ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.