ವಿಜಯಪುರ: ಅನ್ನಭಾಗ್ಯ, ಶಾದಿಭಾಗ್ಯ ಸೇರಿದಂತೆ ಕೆಲವು ಯೋಜನೆಗಳನ್ನು ಮೊದಲು ಬಂದ್ ಮಾಡಿ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ನೀಡಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಜನಪ್ರಿಯ ಯೋಜನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಪೀರಾಪುರ-ಬೂದಿಹಾಳ ಏತನೀರಾವರಿ ಯೋಜನೆಯ ಹಂತ 1 ಪೈಪ್ ವಿತರಣಾ ಜಾಲದ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನ್ನಭಾಗ್ಯ ಯೋಜನೆ ಜನರನ್ನು ದರಿದ್ರಕ್ಕೆ ತಳ್ಳುತ್ತಿದೆ. ಇಂಥ ಅನಾವಶ್ಯಕ ಯೋಜನೆಗಳನ್ನು ಬಂದ್ ಮಾಡುವ ಧೈರ್ಯ ಮಾಡಿ ಆಗಿದ್ದಾಗಲಿ ಎಂದ ಅವರು, ನಮ್ಮ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮೇಲೆ ಸಿಎಂಗೆ ತುಂಬ ಲವ್ ಇದೆ ಎಂದರು.
'ಮತ್ತೊಮ್ಮೆ ಆಶೀರ್ವದಿಸಿ': ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಜನ ಆಶೀರ್ವದಿಸಬೇಕು. ಸಿಎಂ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗುತ್ತಾರೆ. ನಮ್ಮದು ಏನಾದರೂ ತಕರಾರು ಇಲ್ಲ. ಏನೂ ತಕರಾರು ಇಲ್ಲವೇ ಇಲ್ಲ ಎಂದು ವೇದಿಕೆಯಲ್ಲಿಯೇ ಸಿಎಂ ಅವರನ್ನು ಪ್ರಶ್ನಿಸಿದ ಯತ್ನಾಳ್, ನಾವು ತಕರಾರು ಮಾಡುವ ಮಕ್ಕಳು ಅಲ್ಲ. ನಾನು ಏನುೂ ಆಗೋಲ್ಲ ಅಂತಾದ ಮೇಲೆ ತಕರಾರು ಏಕೆ ಮಾಡಲಿ ಎನ್ನುವ ಮೂಲಕ ಸಚಿವ ಸ್ಥಾನ ನೀಡದಿರುವುದಕ್ಕೆ ಸಿಎಂ ಎದುರು ಅಸಮಾಧಾನ ವ್ಯಕ್ತಪಡಿಸಿದರು.
ಯತ್ನಾಳ್ ಮಾತು ಕೇಳಿ ಸಿಎಂ ನಸುನಕ್ಕರು. ಮುಂದುವರೆದು ಮಾತನಾಡಿದ ಯತ್ನಾಳ್, ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಹಣ ತಿನ್ನುವುದು ಹೆಚ್ಚಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೆಲ ರಾಜಕಾರಣಿಗಳು, ಅಧಿಕಾರಿಗಳು ಹಣ ಲಪಟಾಯಿಸುತ್ತಿದ್ದಾರೆ. ಆ ಹಣವನ್ನು ಬೇರೆ ದೇಶದಲ್ಲಿಇಡುತ್ತಾರೆ. ಆ ಮೇಲೆ ಒಂದು ದಿನ ಅದು ಯಾರಿಗೂ ಗೊತ್ತಾಗದೇ ಅಲ್ಲಿ ಮುಚ್ಚಿ ಹೋಗುತ್ತವೆ ಎಂದರು.
ಇದನ್ನೂ ಓದಿ: ರೈತರ ಹಿತಕ್ಕೆ ನೀರಾವರಿಗಾಗಿ ನಾನು ಗಲ್ಲಿಗೇರಲು ಸಿದ್ಧ: ಸಿಎಂ ಬೊಮ್ಮಾಯಿ