ವಿಜಯಪುರ/ಹಾವೇರಿ: ಸಿಂದಗಿ ಹಾಗೂ ಹಾನಗಲ್ ಮತಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರ ಇಂದು ಸಂಜೆ 7ಗಂಟೆಗೆ ಕೊನೆಗೊಳ್ಳಲಿದೆ. ಅವಧಿ ನಂತರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲು ಬಂದಿರುವ ಮತಕ್ಷೇತ್ರದ ಮತದಾರರರಲ್ಲದವರು ಕ್ಷೇತ್ರದ ವ್ಯಾಪ್ತಿಯಿಂದ ಹೊರಗಿರುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಉಭಯ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯುತ್ತಿರುವ ಕಾರಣ ಅಕ್ಟೋಬರ್ 27ರ ಸಂಜೆ 7ರಿಂದ ಅಕ್ಟೋಬರ್ 30ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಗುಂಪು ಸೇರುವುದು, ಮೆರವಣಿಗೆ ಹಾಗೂ ಸಭೆ-ಸಮಾರಂಭ ನಿಷೇಧಿಸಲಾಗಿದೆ. ಉಭಯ ಕ್ಷೇತ್ರಗಳಲ್ಲಿ ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಹಾನಗಲ್ನಲ್ಲಿ 263 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.
ಎರಡು ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಕೂಡ ಭರದ ಪ್ರಚಾರ ನಡೆಸಿದ್ದು, ಪರಸ್ಪರ ಟೀಕಾಪ್ರಹಾರ ನಡೆಸಿವೆ. ಇಂದು ಕೊನೆಯ ದಿನವಾಗಿರುವ ಕಾರಣ ಆಡಳಿತ ಪಕ್ಷದ ಸಚಿವರು ಸೇರಿದಂತೆ ವಿರೋಧ ಪಕ್ಷದವರು ಕೊನೆಯ ಕಸರತ್ತು ನಡೆಸಲಿದ್ದಾರೆ.
ಇದನ್ನೂ ಓದಿರಿ: ಮುಂಬೈ ಡ್ರಗ್ಸ್ ಪ್ರಕರಣ: ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ
ಸಿಂದಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಮನಗೂಳಿ,ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಭೂಸನೂರ ಕಣದಲ್ಲಿದ್ದು, ಜೆಡಿಎಸ್ನಿಂದ ನಾಜಿಯಾ ಶಕೀಲಾ ಅಂಗಡಿ ಸ್ಪರ್ಧೆ ಮಾಡಿದ್ದಾರೆ. ಹಾನಗಲ್ ಕ್ಷೇತ್ರದಿಂದ ಬಿಜೆಪಿಯ ಶಿವರಾಜ್ ಸಜ್ಜನ್, ಕಾಂಗ್ರೆಸ್ನ ಶ್ರೀನಿವಾಸ ಮಾನೆ ಹಾಗೂ ಜೆಡಿಎಸ್ನಿಂದ ನಿಯಾಜ್ ಶೇಖ್ ಕಣದಲ್ಲಿದ್ದಾರೆ.