ವಿಜಯಪುರ: ಕ್ರೂಸರ್ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಗೋಲ ಗುಮ್ಮಜ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ನಗರದ ಸಿಂಧಗಿ ಬೈಪಾಸ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ಸಂಶಯಾಸ್ಪದ ವ್ಯಕ್ತಿಯನ್ನ ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತ ಕ್ರೂಸರ್ ಕಳ್ಳ ಎಂಬುದು ಗೊತ್ತಾಗಿದೆ. ಅಲ್ಲದೇ ಆರೋಪಿ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಪ್ರಕಾಶ ಗಾಣಿಗೇರ (26) ಬಂಧಿತ. ಒಟ್ಟು 5 ಕ್ರೂಸರ್ ವಾಹನಗಳನ್ನು ಕಳ್ಳತನ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ವಿಜಯಪುರದ ಉಕ್ಕಲಿ ಗ್ರಾಮದಲ್ಲಿ ಒಂದು, ಬೆಳಗಾವಿಯ ಅಥಣಿಯಲ್ಲಿ ಒಂದು, ಧಾರವಾಡದಲ್ಲಿ ಒಂದು ಹಾಗೂ ಮಹಾರಾಷ್ಟ್ರದ ಸೋಲ್ಲಾಪುರದಲ್ಲಿ ಎರಡು ಕ್ರೂಸರ್ ಕಳ್ಳತನ ಮಾಡಿದ್ದಾನೆ.
ಈ ಹಿಂದೆ ಕಳ್ಳತನ ಮಾಡಿದ್ದ ಆರೋಪಗಳು ಇತನ ಮೇಲೆ ಇವೆ. ಒಟ್ಟು ಐದು ಕ್ರೂಸರ್ ವಾಹನ, 36 ಲಕ್ಷ ಮೌಲ್ಯದ 5 ತೂಫಾನ್ ಟೆಂಪೋ ಕ್ರೂಸರ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರೂಸರ್ ಕಳ್ಳತನ ಜಾಲವನ್ನು ಪತ್ತೆ ಮಾಡಲು ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ಪ್ರಕರಣವನ್ನು ಪತ್ತೆ ಹಚ್ಚಿದ ಎಲ್ಲ ಅಧಿಕಾರಿಗಳಿಗೆ 20 ಸಾವಿರ ರೂ. ನಗದು ಬಹುಮಾನವನ್ನು ಎಸ್ಪಿ ಪ್ರಕಾಶ ನಿಕ್ಕಂ ಘೋಷಿಸಿದ್ದಾರೆ.