ಮುದ್ದೇಬಿಹಾಳ: ತಾಲೂಕಿನ ತಂಗಡಗಿಯಿಂದ ಕೋಳೂರು-ಕುಂಟೋಜಿ ಬಳಗಾನೂರ ಮಾರ್ಗವಾಗಿ ಹಾಕುತ್ತಿರುವ ವಿದ್ಯುತ್ ಕಂಬಗಳನ್ನು ಈಗಾಗಲೇ ನೆಟ್ಟಿರುವ ಗಿಡಗಳಿಂದ ಅಂತರ ಕಾಯ್ದುಕೊಂಡು ಹಾಕಬೇಕು ಎಂದು ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಹೆಸ್ಕಾಂ, ಆರ್.ಡಬ್ಲ್ಯೂ.ಎಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಗೆಳೆಯರ ಬಳಗದ ಸದಸ್ಯರು, ಕುಡಿಯುವ ನೀರಿನ ಯೋಜನೆಗಾಗಿ ವಿದ್ಯುತ್ ಕಂಬಗಳನ್ನು ಹಾಕುತ್ತಿದ್ದಾರೆ. ಆದರೆ, ಈ ಮಾರ್ಗದಲ್ಲಿ ಈಗಾಗಲೇ ಕೆಬಿಜೆಎನ್ಎಲ್ನಿಂದ ಸಾವಿರಾರು ಗಿಡಗಳನ್ನು ನೆಡಲಾಗಿದೆ. ಸದ್ಯ ಆರೋಗ್ಯವಾಗಿ ಬೆಳೆಯುತ್ತಿದ್ದು, ಭವಿಷ್ಯದಲ್ಲಿ ಇದೇ ಸಾಲಿನಲ್ಲಿ ಹಾಕುವ ವಿದ್ಯುತ್ ಕಂಬಗಳಿಂದ ಗಿಡಗಳಿಗೆ ತೊಂದರೆಯಾಗುವುದು ಖಂಡಿತ. ಅರಣ್ಯ ರಕ್ಷಿಸುವ ಕೆಲಸವನ್ನು ಮಾಡಬೇಕು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಮರಗಿಡಗಳ ಮಾರಣಹೋಮವನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಬಳಗದ ಸಂಚಾಲಕ ಮಹಾಬಳೇಶ ಗಡೇದ ಮಾತನಾಡಿ, ಅರಣ್ಯ ಇಲಾಖೆಯವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಆದರೆ ಈ ಯೋಜನೆಯ ಗುತ್ತಿಗೆದಾರರು ತರಾತುರಿಯಲ್ಲಿ ಕೆಲಸ ಮಾಡಿ ಪರಿಸರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಈ ಕಾಮಗಾರಿ ನಿಲ್ಲಿಸಿ ರಸ್ತೆ ಬದಿಯಲ್ಲಿರುವ ಮರಗಳ ಸಮೀಪದಲ್ಲಿಯೇ ವಿದ್ಯುತ್ ಕಂಬಗಳನ್ನು ನೆಡುವುದನ್ನು ಕೈ ಬಿಡಬೇಕು. ರಸ್ತೆಯಿಂದ ಒಳಗಡೆ ಗಿಡಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.