ವಿಜಯಪುರ : ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆಗೆ ದಿನ ಹತ್ತಿರವಾಗುತ್ತಿದ್ದಂತೆ ದೇಶಾದ್ಯಂತ ಕೋಟಿ ಕೋಟಿ ಭಕ್ತರಲ್ಲಿ ರಾಮನಾಮ ಮೂಡುತ್ತಿದೆ. ಈ ಹಿನ್ಲೆಲೆಯಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಧ್ಯಕ್ಷತೆಯಲ್ಲಿರುವ ಜೆಎಸ್‌ಎಸ್ (ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್) ಆಸ್ಪತ್ರೆಯಲ್ಲಿ ಅಯೋಧ್ಯೆ ಸಂಭ್ರಮೋತ್ಸವವನ್ನು ಐದು ದಿನಗಳ ಕಾಲ ಆಚರಿಸಲಾಗುತ್ತಿದೆ. ಜ.18 ರಿಂದ 22ರ ವರೆಗೆ ಗರ್ಭಿಣಿ ಮಹಿಳೆಯರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
ಓಪಿಡಿ, ಐಪಿಡಿ, ನಾರ್ಮಲ್ ಡೆಲಿವರಿ, ಸಿಸೇರಿಯನ್ ಡೆಲಿವರಿ, ಮೆಡಿಕಲ್, ಲ್ಯಾಬ್, ವೈದ್ಯಕೀಯ ತಪಾಸಣೆ, ಸ್ಕ್ಯಾನಿಂಗ್ ಎಲ್ಲವೂ ಉಚಿತ ಮಾಡಲಾಗಿದೆ. ಈ ಸಮಯದಲ್ಲಿ ಜನಿಸುವ ಮಗು ಗಂಡಾದರೆ ರಾಮ, ಹೆಣ್ಣಾದರೆ ಸೀತೆಯ ಪ್ರತಿರೂಪ ಎಂದುಕೊಂಡು ಸೇವೆ ಭಾವನೆಯಿಂದ ಆದೇಶ ಕೊಟ್ಟಿದ್ದಾರೆ. ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ಹೋದರೆ ಲಕ್ಷಾಂತರ ರೂಪಾಯಿ ಖರ್ಚಾಗುವ ಈ ಸಮಯದಲ್ಲಿ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಮಾಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಬಂದು ಉಚಿತ ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯರಾದ ಡಾ.ಶರಣ್ ಮಳಖೇಡಕರ್ ತಿಳಿಸಿದರು.
ಇದನ್ನೂ ಓದಿ : ಶ್ರೀರಾಮನ ಟ್ಯಾಟೂ ಉಚಿತ: ಬೆಳಗಾವಿಯಲ್ಲಿ ಶಾಸಕನಿಂದ ವಿನೂತನ ಅಭಿಯಾನ
ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ. ಒಬ್ಬೊಬ್ಬರು ಒಂದೊಂದು ಸೇವೆ ಮಾಡುತ್ತಿದ್ದಾರೆ. ಇನ್ನು ಹಲವರು ಆಯೋಧ್ಯೆಗೆ ಕಾಲ್ಗಡಿಗೆ ಯಾತ್ರೆ, ಸೈಕಲ್ ಸವಾರಿ. ಕೆಲವು ಯುವಕರು ಬೈಕ್ ಸವಾರಿ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದಾರೆ. ಇನ್ನು ಆರ್ಎಸ್ಎಸ್, ಬಜರಂಗದಳ, ವಿಎಚ್ಪಿಗಳು ಸೇರಿದಂತೆ ದೇಶಾದ್ಯಂತ ರಾಮಭಕ್ತರು ದೀಪ ಹಚ್ಚಿ ಸಂಭ್ರಮಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಶ್ರೀರಾಮನ ಹೆಸರಲ್ಲಿ ಆಯಾಯ ಪ್ರದೇಶಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಇಡೀ ದೇಶವೇ ರಾಮ ನಾಮ ಜಪದಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ವಿಜಯಪುರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ರಾಮನಿಗೆ ಅಳಿಲು ಸೇವೆ ಸಲ್ಲಿಸಲು ಮುಂದಾಗಿದೆ. ನಿಜವಾಗಿ ಸಮಸ್ಯೆ ಇರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.