ಕಾರವಾರ: ಬಿಸಿಲಿನ ತಾಪ ದಿನೇ ದಿನೆ ಏರತೊಡಗಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಆದರೆ ಇಂತಹ ಸಂಕಷ್ಟದ ಸ್ಥಿತಿಯನ್ನು ಅರಿತ ಕಾರವಾರ ನಗರಸಭೆ ಇದೀಗ ಜನರಿಗೆ ನೀರು ಪೂರೈಕೆ ಮಾಡಿದಂತೆ, ಮೂಕ ಜೀವಿಗಳ ದಾಹವನ್ನು ತೀರಿಸಲು ಮುಂದಾಗಿದ್ದು, ನಗರದ ಅಲ್ಲಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನಿಟ್ಟು ಮಾನವೀಯತೆ ಮೆರೆದಿದೆ.
ಹೌದು, ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದೊಂದು ತಿಂಗಳಿಂದ ಬಿಸಿಲಿನ ತಾಪ ಜೋರಾಗಿದೆ. ಎಲ್ಲೆಡೆ ನೀರಿನ ಸೆಲೆಗಳು ಬತ್ತತೊಡಗಿದ್ದು, ಹನಿ ನೀರಿಗೂ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಇಂತಹ ಸ್ಥಿತಿಯಲ್ಲಿ ಜನರೇನೊ ಹಣದ ಮೂಲಕ ಇಲ್ಲವೆ ಜಲ ಮೂಲ ಹುಡುಕಿ ನೀರು ಪಡೆಯಬಹುದು. ಆದರೆ ಮೂಕ ಜೀವಿಗಳ ಪಾಡು ಹೇಳದಾಗಿದೆ.
ಪ್ರಾಣಿ ಪ್ರೀಯರ ಸಲಹೆ ಹಾಗೂ ಒತ್ತಾಯದ ಮೇರೆಗೆ ಇದೀಗ ಕಾರವಾರ ನಗರಸಭೆ ನಗರದ ವಿವಿಧೆಡೆ ನೀರಿನ ತೊಟ್ಟಿಗಳನ್ನು ಇಟ್ಟು ನೀರನ್ನು ಪೂರೈಕೆ ಮಾಡುತ್ತಿದೆ. ಈಗಾಗಲೇ ಮೊದಲ ದಿನ ಆರು ಕಡೆಗಳಲ್ಲಿ ಕಾಂಕ್ರಿಟ್ ನಿರ್ಮಿತ ನೀರಿನ ತೊಟ್ಟಿ ಅಳವಡಿಸಿದ್ದು, ಬಿಸಿಲಿನ ಝಳಕ್ಕೆ ಬಾಯಾರಿಕೊಳ್ಳುವ ಜಾನುವಾರುಗಳು ಈ ತೊಟ್ಟಿಯಲ್ಲಿರುವ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿವೆ. ಇನ್ನು ಇಂತಹ ಮಹತ್ ಕಾರ್ಯಕ್ಕೆ ನಗರಸಭೆ ಜೊತೆಗೆ ಪ್ರಾಣಿ ಪ್ರೇಮಿಗಳು ಕೈ ಜೋಡಿಸಿದ್ದಾರೆ.
ನಗರದಲ್ಲಿ ಎಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಎಲ್ಲಿ ತೊಟ್ಟಿಯಲ್ಲಿ ನೀರು ಖಾಲಿ ಆಗಿದೆ. ಮತ್ತೆಲ್ಲಿ ನೀರಿನ ತೊಟ್ಟಿ ಇಡಬೇಕು ಎಂಬಿತ್ಯಾದಿ ಸಲಹೆ ಹಾಗೂ ಮಾಹಿತಿಯನ್ನು ನಗರಸಭೆಗೆ ನೀಡುವ ಮೂಲಕ ಕೈ ಜೋಡಿಸಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ನೀಡಿದ ಪೌರಾಯುಕ್ತ ಎಸ್.ಯೊಗೇಶ್ವರ್, ಎಲ್ಲೆಡೆ ನೀರಿನಸೆಲೆ ಬತ್ತತೊಡಗಿದೆ. ಜನರಿಗೆ ನೀರು ಪೂರೈಕೆ ಮಾಡಿದಂತೆ ಪ್ರಾಣಿಗಳಿಗೂ ನೀರಿನ ವ್ಯವಸ್ಥೆ ಮಾಡಿದ್ದು, ನಗರದ ಪತ್ರಿಕಾ ಭವನ ಎದುರು, ಸಿದ್ಧಿ ವಿನಾಯಕ ದೇವಸ್ಥಾನದ ಸಮೀಪ, ಮಾರುತಿ ದೇವಸ್ಥಾನ, ಕೋಡಿಬೀರ ದೇವಸ್ಥಾನ, ನವರತ್ನ ಹೊಟೆಲ್, ಕೆಎಚ್‍ಬಿ ಕಾಲೊನಿಯ ಹರಿ ಓಂ ಸರ್ಕಲ್ ಬಳಿ ತೊಟ್ಟಿಗಳನ್ನಿಡಲಾಗಿದೆ ಎಂದು ಮಾಹಿತಿ ನೀಡಿದರು.
ತಲಾ 500 ರೂ. ವೆಚ್ಚದಲ್ಲಿ ನಗರಸಭೆ ಈ ತೊಟ್ಟಿಗಳನ್ನು ಖರೀದಿಸಿದೆ. ಜಾನುವಾರುಗಳು ಹೆಚ್ಚು ಓಡಾಟ ನಡೆಸುವ ಮತ್ತು ಒಂದೆಡೆ ಸೇರುವ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ಸಾರ್ವಜನಿಕರು ಈ ವಿಚಾರದಲ್ಲಿ ನಗರಸಭೆಗೆ ಸಲಹೆಯನ್ನೂ ನೀಡಬಹುದು. ನೀರು ಖಾಲಿಯಾದ ಕೂಡಲೆ ಮಾಹಿತಿ ನೀಡಿದರೆ ಟ್ಯಾಂಕರ್ ಮೂಲಕ ತೊಟ್ಟಿಗಳಿಗೆ ನೀರು ತುಂಬಿಸುವ ಕೆಲಸವನ್ನು ನಗರಸಭೆಯೇ ಮಾಡಲಿದೆ ಎಂದು ಹೇಳಿದರು.
ಈಗಾಗಲೇ ಬಿಸಿಲಿನ ಜಳ ಹೆಚ್ಚಾಗಿದ್ದು, ಮಳೆ ಬಾರದೆ ಇದ್ದಲ್ಲಿ ಇನ್ನಷ್ಟು ಸ್ಥಿತಿ ಗಂಭೀರವಾಗಲಿದೆ. ಇಂತಹ ಸ್ಥಿತಿಯಲ್ಲಿ ಅವಶ್ಯವಿರುವ ಕಡೆ ಮತ್ತಷ್ಟು ತೊಟ್ಟಿಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಸ್ಥಳೀಯರ ಹಾಗೂ ಪ್ರಾಣಿ ಪ್ರೀಯರ ಸಲಹೆ ಸಹಕಾರ ಕೂಡ ಅಗತ್ಯವಾಗಿದೆ ಎಂದರು.
ಒಟ್ಟಿನಲ್ಲಿ ನೀರಿನ ಸಮಸ್ಯೆಯಿಂದ ಜನರು ಮಾತ್ರವಲ್ಲದೆ ಜಾನುವಾರುಗಳು ಬಳಲುತ್ತಿದ್ದು, ಇಂತಹ ಸ್ಥಿತಿಯಲ್ಲಿ ಕಾರವಾರ ನಗರಸಭೆ ಹಾಗೂ ಪ್ರಾಣಿ ಪ್ರೀಯರು ಕೈಗೊಂಡ ಕ್ರಮಕ್ಕೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.