ಕಾರವಾರ: ಅಂಗನವಾಡಿ ಗೋಡೆಯ ಸಿಮೆಂಟ್ ಪ್ಲಾಸ್ಟರ್ ಕುಸಿದು ಕೂದಲೆಳೆಯ ಅಂತರದಲ್ಲಿ ಅಂಗನವಾಡಿ ಕಾರ್ಯಕರ್ತೆ ಪಾರಾದ ಘಟನೆ ಹೊನ್ನಾವರ ತಾಲೂಕಿನ ಕಡ್ನೀರು ಅಂಗನವಾಡಿ ಕೇಂದ್ರದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಗೋಡೆ ಬಿರುಕು ಬಿಟ್ಟು ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.
ಅಂಗನವಾಡಿ ಕೇಂದ್ರದಲ್ಲಿ ನಿನ್ನೆ ಮಕ್ಕಳ ಹೊರತಾಗಿ ಕಾರ್ಯಕರ್ತೆ ಹಾಗೂ ಸಹಾಯಕಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಈ ವೇಳೆ, ಗೋಡೆ ಮಧ್ಯಭಾಗದಲ್ಲಿ ಸದ್ದು ಕೇಳಿಸಿದ್ದು, ಕ್ಷಣಾರ್ಧದಲ್ಲಿ ಸಿಮೆಂಟ್ ಪ್ಲಾಸ್ಟರಿನ ದೊಡ್ಡ ಭಾಗವೇ ನೆಲಕ್ಕಪ್ಪಳಿಸಿದೆ. ಪ್ಲಾಸ್ಟರ್ ಬಿದ್ದ ಹೊಡೆತಕ್ಕೆ ಕಾರ್ಯಕರ್ತೆ, ಸಹಾಯಕಿ ಹಾಗೂ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದ ಆಶಾ ಕಾರ್ಯಕರ್ತೆ ಕೂಗಾಡಿದ್ದಾರೆ. ಕೂಡಲೇ ಪಕ್ಕದ ಶಾಲೆಯ ಶಿಕ್ಷಕರು, ಊರಿನ ಕೆಲವರು ಬಂದು ನೋಡಿದಾಗ ಗೋಡೆ ಕುಸಿದು ಬಿದ್ದಿರುವುದು ತಿಳಿದಿದೆ.
![Karwar](https://etvbharatimages.akamaized.net/etvbharat/prod-images/15562565_940_15562565_1655256905925.png)
ಗೋಡೆ ಸಂಪೂರ್ಣ ಬಿರುಕು ಬಿಟ್ಟಿದ್ದು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ನಾಲ್ಕು ವರ್ಷಗಳಿಂದ ರಂಗಮಂದಿರಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಈ ಅಂಗನವಾಡಿ ಕೇಂದ್ರದಲ್ಲಿ 24 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಅಂಗನವಾಡಿ ಕಾರ್ಯಕರ್ತೆ ಚಂದ್ರಕಲಾ ನಾಯ್ಕ ಅಂಗನವಾಡಿ ಸ್ಥಿತಿ ಗತಿಗಳ ಬಗ್ಗೆ ಪಾಲಕರ ಸಭೆ ನಡೆಸಿ ಸಾಕಷ್ಟು ಬಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದು, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಕಟ್ಟಡ ಕುಸಿದು ಬಿದ್ದು, ಅವಘಡ ಸಂಭವಿಸುವಷ್ಟರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನೀರಿನ ಹಾಹಾಕಾರ: ಖಾಲಿ ಕೊಡಗಳ ಸಮೇತ ಜನರ ಪ್ರತಿಭಟನೆ