ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮೇ.4 ರವರೆಗೂ ಲಾಕ್ ಡೌನ್ ಮುಂದುವರಿಯಲಿದ್ದು, ಅನಾವಶ್ಯಕವಾಗಿ ಓಡಾಡುವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಕೆ. ಹರೀಶ ಕುಮಾರ್ ಹೇಳಿದ್ದಾರೆ.
ಏಪ್ರಿಲ್ 21 ರ ಬಳಿಕ ಕೂಡ ಲಾಕ್ಡೌನ್ ಮುಂದುವರೆಯಲಿದ್ದು, ರಸ್ತೆಯಲ್ಲಿ ಸುಖಾ ಸುಮ್ಮನೆ ತಿರುಗಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಸರ್ಕಾರ ನಿರ್ಧರಿಸಿದಂತೆ ಕೃಷಿ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಇದೀಗ ಏಪ್ರಿಲ್ 21 ರಿಂದ ಸರಕು ಸಾಗಣೆ, ಅಗತ್ಯ ವಸ್ತುಗಳ ಉತ್ಪಾದನೆ, ವೈದ್ಯಕೀಯ, ತುರ್ತು ಸೇವೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದರ ಜೊತೆಗೆ ಅಗತ್ಯ ಕೈಗಾರಿಕಾ ಚಟುವಟಿಕೆಗಳ ಪ್ರಾರಂಭಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗುವುದು ಎಂದು ಹೇಳಿದರು.
ಮೇ 4 ರ ಬಳಿಕ ಮುಂದೇನು?
ಉತ್ತರಕನ್ನಡ ಜಿಲ್ಲಾಡಳಿತ ಕೊರೊನಾ ತಡೆಯುವ ನಿಟ್ಟಿನಲ್ಲಿ ಆರಂಭದಿಂದಲೂ ಮುಂಜಾಗೃತೆ ತೆಗೆದುಕೊಂಡಿದ್ದರ ಪರಿಣಾಮ ಸದ್ಯ ಹತೋಟಿಯಲ್ಲಿದೆ. ಆದರೆ ಇದೀಗ ಎಲ್ಲರಿಗೂ ಮುಕ್ತವಾಗಿ ಓಡಾಡಲು ಅವಕಾಶ ಕೊಟ್ಟರೆ ಮಾಡಿದ ಪ್ರಯತ್ನ ಶೂನ್ಯವಾಗುತ್ತದೆ. ಆದ್ದರಿಂದ ಮೇ. 4 ರ ಬಳಿಕ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದರೂ ಝೋನಲ್ ಕಂಟೇನ್ಮೆಂಟ್ ಪ್ರದೇಶದಲ್ಲಿ ಮಾತ್ರ ಲಾಕ್ ಡೌನ್ ಮುಂದುವರಿಸುವ ಬಗ್ಗೆ ಯೋಚಿಸಲಾಗಿದೆ.
ಯಾವ ಪ್ರದೇಶದಲ್ಲಿ ಸೋಂಕಿತರು ಕಂಡು ಬಂದಿದ್ದಾರೋ ಆ ಪ್ರದೇಶದ 3 ಕಿ.ಮೀ ಸುತ್ತ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಆದರೆ ಸಡಿಲಿಕೆ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗುಂಪು ಸೇರುವುದಕ್ಕೆ ಅವಕಾಶ ಇರುವುದಿಲ್ಲ ಎಂದರು.