ಬಾಲಿವುಡ್ ನಟಿ ಕಂಗನಾ ರಣಾವತ್ ಸಾರಥ್ಯದ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಜನವರಿ 17, ನಾಳೆ ತೆರೆಗಪ್ಪಳಿಸಲು ಸಜ್ಜಾಗಿದೆ. ಭಾರತದ ಏಕೈಕ ಮಹಿಳಾ ಪ್ರಧಾನಿ ದಿ.ಇಂದಿರಾ ಗಾಂಧಿ ಅವರನ್ನು ಈ ಚಿತ್ರತಂಡ ತೆರೆಯ ಮೇಲೆ ಹೇಗೆ ತರಲಿದೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿದೆ. ಕಳೆದ ಹಲವು ವರ್ಷಗಳಲ್ಲಿ, ಹಲವು ಕಲಾವಿದರು ಈ ಅಪ್ರತಿಮ ರಾಜಕೀಯ ನಾಯಕಿಯ ಪಾತ್ರಕ್ಕೆ ಜೀವ ತುಂಬೋ ಸವಾಲನ್ನು ಸ್ವೀಕರಿಸಿದ್ದಾರೆ.
ಸುಪ್ರಿಯಾ ವಿನೋದ್: ಮರಾಠಿ ಸಿನಿಮಾ ಯಶವಂತರಾವ್ ಚವಾಣ್ (2014) ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸುಪ್ರಿಯಾ ವಿನೋದ್ ಅವರು ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕಿಯ ನೋಟ, ಧೈರ್ಯವನ್ನು ತೆರೆ ಮೇಲೆ ಅದ್ಭುತವಾಗಿ ಚಿತ್ರಿಸಿದ್ದರು. ಅವರ ತಂದೆ ರತ್ನಾಕರ್ ಮಟ್ಕರಿ ನಿರ್ದೇಶಿಸಿದ್ದ 'ಇಂದಿರಾ-ದಿ ಪ್ಲೇ' (2015) ಮೂಲಕ ಪಾತ್ರವನ್ನು ಪ್ರಸ್ತುತಪಡಿಸಿದ್ದರು. ಮಧುರ್ ಭಂಡಾರ್ಕರ್ ಅವರ ಇಂದು ಸರ್ಕಾರ್ (2017) ಚಿತ್ರದಲ್ಲಿ ಸುಪ್ರಿಯಾ ಮತ್ತೊಮ್ಮೆ ಈ ಪಾತ್ರದಲ್ಲಿ ಕಾಣಿಸಿಕೊಂಡರು.
ಅವಂತಿಕಾ ಅಕೇರ್ಕರ್: ನಟಿ ಅವಂತಿಕಾ ಅಕೇರ್ಕರ್ ಅವರು ಇಂದಿರಾ ಗಾಂಧಿ ಪಾತ್ರವನ್ನು ಎರಡು ಬಾರಿ ನಿರ್ವಹಿಸಿದ್ದಾರೆ. ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಜೀವನಾಧರಿತ ಠಾಕ್ರೆ (2019)ನಲ್ಲಿ, ನವಾಜುದ್ದೀನ್ ಸಿದ್ದಿಕಿ ಜೊತೆ ನಟಿಸಿದ್ದರು. ನಂತರ, ಭಾರತದ ಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ವಿಜಯವನ್ನಾಧರಿಸಿ ಬಂದ ಸ್ಪೋರ್ಟ್ಸ್ ಡ್ರಾಮಾ '83' (2021)ನಲ್ಲಿ ಈ ಐಕಾನಿಕ್ ರೋಲ್ನಲ್ಲಿ ಕಾಣಿಸಿಕೊಂಡರು.
ಲಾರಾ ದತ್ತಾ: ಬೆಲ್ ಬಾಟಮ್ (2021) ಎಂಬ ಚಿತ್ರದಲ್ಲಿ ನಟಿ ಲಾರಾ ದತ್ತಾ ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ. ಈ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆಯಿತು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಬೆನ್ನಿನಿಂದ 2.5 ಇಂಚು ಉದ್ದದ ಚಾಕು ಹೊರಕ್ಕೆ; ಐಸಿಯುನಲ್ಲಿ ನಟ, ವೈದ್ಯರು ಹೇಳಿದ್ದಿಷ್ಟು
ಫಾತಿಮಾ ಸನಾ ಶೇಖ್: ಮೇಘನಾ ಗುಲ್ಜಾರ್ ನಿರ್ದೇಶನದ ಇತ್ತೀಚಿನ ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ಫಾತಿಮಾ ಸನಾ ಶೇಖ್ ಇಂದಿರಾ ಗಾಂಧಿ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. 1971ರ ಯುದ್ಧ ಹಿನ್ನೆಲೆಯಲ್ಲಿ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಅವರ ನಾಯಕತ್ವದ ಸುತ್ತ ಕಥೆ ಹೆಣೆಯಲಾಗಿದೆ. ಪ್ರಧಾನ ಮಂತ್ರಿಯಾಗಿ ಫಾತಿಮಾ ಸನಾ ಶೇಖ್ ಅವರ ಚಿತ್ರಣ ವ್ಯಾಪಕವಾಗಿ ಸದ್ದು ಮಾಡಿತ್ತು.
ಇದನ್ನೂ ಓದಿ: 100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್
ಕಂಗನಾ ರಣಾವತ್: ಭಾರತದ ಅತ್ಯಂತ ವಿವಾದಾತ್ಮಕ ರಾಜಕೀಯ ಅವಧಿಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಸುತ್ತ ಹೆಣೆಯಲಾದ ಕಥೆಯಲ್ಲಿ ಕಂಗನಾ ರಣಾವತ್ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ಹಲವು ಸಮಸ್ಯೆಗಳನ್ನು ಎದುರಿಸಿದ ಹಿನ್ನೆಲೆ ಹಲವು ಬಾರಿ ಸಿನಿಮಾ ವಿಳಂಬವಾಯಿತು. ಫೈನಲಿ ಎಮರ್ಜೆನ್ಸಿ ಜನವರಿ 17, 2025ರಂದು ಬಿಡುಗಡೆಯಾಗಲಿದೆ.