ಶಿರಸಿ: ಆರು ತಿಂಗಳ ಹಿಂದೆ ಮುಂಡಗೋಡಿನ ಕಾಡಿನಲ್ಲಿ ಸಿಕ್ಕಿದ್ದ ಅಪರಿಚಿತ ವ್ಯಕ್ತಿಯ ಶವದ ರಹಸ್ಯ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುಂಡಗೋಡಿನ ಕಾತೂರು ಅರಣ್ಯ ಪ್ರದೇಶದಲ್ಲಿ ಆರು ತಿಂಗಳ ಹಿಂದೆ ಪ್ರಾಣಿಗಳು ತಿಂದು ಬಿಟ್ಟಿದ್ದ ಶವ ಪತ್ತೆಯಾಗಿತ್ತು. ಈ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಅದರ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ಆಸ್ತಿಯ ವಿಚಾರಕ್ಕಾಗಿ ಸಂಬಂಧಿಕರನ್ನೇ ಕೊಲ್ಲಲಾಗಿದೆ ಎಂಬ ಭಯಾನಕ ಸತ್ಯ ಹೊರಬಿದ್ದಿದೆ.
ಹುಬ್ಬಳ್ಳಿಯ ನವನಗರದ ಶ್ರೀನಿವಾಸ ನಾಯಕ (32) ಕೊಲೆಯಾದ ದುರ್ದೈವಿ. ಈತನ ತಾಯಿಯ ತಂಗಿಯ ಮಗನಾದ ವರಸೆಯಲ್ಲಿ ತಮ್ಮನಾಗುವ ಉಣಕಲ್ಲಿನ ಅಭಿಷೇಕ ಪ್ರಮುಖ ಆರೋಪಿಯಾಗಿದ್ದು, ಈತನ ಜೊತೆಯಲ್ಲಿ ಸುರೇಶ ಲಮಾಣಿ, ರಾಮಕುಮಾರ ತಾಟಿಮಸ್ಲಾ ಹಾಗೂ ಬಸವರಾಜ ಕೊಲೆಗೆ ಸಹಕರಿಸಿದವರಾಗಿದ್ದಾರೆ ಎನ್ನಲಾಗಿದೆ.
ಅಭಿಷೇಕ ಕೊಲೆಗೆ ಎಲ್ಲಾ ರೀತಿಯ ಪ್ಲಾನ್ ಮಾಡಿಕೊಂಡು, ಪ್ರವಾಸಕ್ಕೆ ಹೋಗುವ ನೆಪದಲ್ಲಿ ಶ್ರೀನಿವಾಸ ನಾಯಕರನ್ನು ಮುಂಡಗೋಡಿಗೆ ಕರೆ ತಂದಿದ್ದನಂತೆ. ನಂತರ ಸಾರಾಯಿ ಕುಡಿಸಿ ಕಾಡಿನ ಸಮೀಪ ಹತ್ಯೆ ಮಾಡಿ, ಬೈಕ್ ಮುಖಾಂತರ ಶವವನ್ನು ಕಾಡಿನಲ್ಲಿ ಹೂಳಲಾಗಿತ್ತು. ಆಸ್ತಿ ತನ್ನ ಪಾಲಾಗಲಿದೆ ಎಂಬ ಕಾರಣಕ್ಕಾಗಿ ಈ ಕೃತ್ಯವನ್ನು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಮೃತ ವ್ಯಕ್ತಿಯು ಊರಿಗೆ ಹೋಗಿದ್ದಾನೆ ಎಂದು ನಂಬಿಸಿ, ಕಾಣೆಯಾದ ಕುರಿತು ಪ್ರಕರಣ ದಾಖಲಾಗದಂತೆ ಆರೋಪಿಗಳು ನೋಡಿಕೊಂಡಿದ್ದರು. ಮುಂಡಗೋಡ ಪೊಲೀಸರ ಚಾಕಚಕ್ಯತೆಯಿಂದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.