ಕಾರವಾರ: ಉಪ ಚುನಾವಣೆಯಲ್ಲಿ ಸೋತವರಿಗೂ ನ್ಯಾಯ ಸಿಗಬೇಕು. ಸರ್ಕಾರ ರಚನೆಯಲ್ಲಿ ಪಕ್ಷ ತೊರೆದು ಸೋತವರ ಪಾತ್ರ ಕೂಡ ಮುಖ್ಯವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ವಿನಂತಿಸಲಾಗುವುದು ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಗೆದ್ದವರು ತಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಎಂಟಿಬಿ ನಾಗರಾಜ್ ಆರೋಪದ ಕುರಿತು ಮಾತನಾಡಿದ ಅವರು, ನಾವು 17 ಜನ ರಾಜೀನಾಮೆ ನೀಡಿದ್ದರಿಂದ ಇಂದು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಲು ಸಾಧ್ಯವಾಗಿದೆ. ಆದರೆ ಉಪ ಚುನಾವಣೆಯಲ್ಲಿ ಮೂವರು ಸೋಲನುಭವಿಸಿದ್ದಾರೆ. ಸರ್ಕಾರ ರಚನೆಯಲ್ಲಿ ಅವರ ಪಾತ್ರ ಕೂಡ ಪ್ರಮುಖವಾಗಿದೆ. ನಾವೆಲ್ಲರೂ ಅವರ ಪರ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ನ್ಯಾಯ ದೊರಕಿಸಲು ವಿನಂತಿಸುತ್ತೇವೆ ಎಂದರು.
ಎಂಟಿಬಿ ನಾಗಾರಜ್ ನಮ್ಮೆಲ್ಲರ ಸ್ನೇಹಿತ. ಅವರನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಎಂಟಿಬಿ ನೋವಾಗಿ ಹಾಗೆ ಮಾತನಾಡಿರಬಹುದು. ಅವರು ಅಂದುಕೊಂಡಂತೆ ನಾವ್ಯಾರೂ ಅವರನ್ನು ಬಿಟ್ಟು ಹೋಗಿಲ್ಲ ಎಂದರು. ಇನ್ನು ಬಿಜೆಪಿ ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ಅಷ್ಟು ದೊಡ್ಡವರ ಬಗ್ಗೆ ನಾನ್ಯಾಕೆ ಮಾತನಾಡಲಿ. ಅದರ ಬಗ್ಗೆ ದೊಡ್ಡವರೇ ಉತ್ತರ ನೀಡುತ್ತಾರೆ ಎಂದರು.