ಭಟ್ಕಳ: ಹಾಡುಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ದೋಚಿ ಪರಾರಿಯಾದ ಘಟನೆ ತಾಲೂಕಿನ ಕಂಚಿಕೇರಿ ಎಂಬಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ.
ನಾಗರಾಜ ಗಣಪತಿ ಹೆಗಡೆ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಪುರೋಹಿತ ವೃತ್ತಿ ಮಾಡಿಕೊಂಡಿದ್ದು, ಮುಂಜಾನೆ ಕುಂದಾಪುರದ ಅಂಬಾಗಿಲಿನಲ್ಲಿ ಪೂಜೆಗೆ ತೆರಳಿದ್ದರು. ನಾಗರಾಜ ಪತ್ನಿ ಕೋಣಾರನಲ್ಲಿ ಅಂಗನವಾಡಿ ಶಿಕ್ಷಕರಾಗಿದ್ದು ಕೆಲಸಕ್ಕೆ ತೆರಳಿದ್ದರು. ಈ ವೇಳೆ ಕಳ್ಳರು ಮನೆ ಬಾಗಿಲು ಮುರಿದು ಮನೆಯಲ್ಲಿರುವ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ 2 ಕಪಾಟು ಮುರಿದು, 75 ಸಾವಿರ ನಗದು ಮತ್ತು ಅಂದಾಜು 17 ರಿಂದ 18 ಗ್ರಾಂ. ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂದು ಮಾಲೀಕರು ತಿಳಿಸಿದ್ದಾರೆ.
ಕಳ್ಳತನದ ಜೊತೆಗೆ ಅಡುಗೆ ಕೋಣೆ ಪ್ರವೇಶಿಸಿದ ಖದೀಮರು, ಕೋಣೆಯಲ್ಲಿರುವ ಪಾತ್ರೆಯನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಪಾತ್ರೆಯಲ್ಲಿರುವ ಲಡ್ಡು ತಿಂದು ಪರಾರಿಯಾಗಿದ್ದಾರೆ. ಈ ಕುರಿತು ನಾಗರಾಜ ಹೆಗಡೆ ಗ್ರಾಮೀಣ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಸಂಜೆ 6 ಗಂಟೆ ಸುಮಾರಿಗೆ ಕಾರವಾರದಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.