ಕಾರವಾರ: ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿರುವ ತೌಕ್ತೆ ಚಂಡಮಾರುತಕ್ಕೆ ಸಿಲುಕಿದ ಜಿಲ್ಲೆಯ 31 ಗ್ರಾಮಗಳಲ್ಲಿ ಸಾಕಷ್ಟು ನಷ್ಟ ಉಂಟಾಗಿದ್ದು, ಮೊದಲ ದಿನವೇ 92 ಮನೆಗಳಿಗೆ ಹಾನಿಯಾಗಿದೆ.
ತೌಕ್ತೆ ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಕೃಷಿ, ತೋಟಗಾರಿಕೆ, ವಸತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಚಂಡಮಾರುತದಿಂದ ಇನ್ನಿಲ್ಲದ ಹಾನಿ ಸಂಭವಿಸಿದೆ. ಈ ಪೈಕಿ ಕಾರವಾರ ಹಾಗೂ ಕುಮಟಾದಲ್ಲಿ ತಲಾ 3 ಗ್ರಾಮಗಳಲ್ಲಿ, ಅಂಕೋಲಾ, ಹೊನ್ನಾವರದಲ್ಲಿ ತಲಾ 7, ಭಟ್ಕಳ 11 ಗ್ರಾಮಗಳಲ್ಲಿ ಹಾನಿಯಾಗಿದೆ. ಭಟ್ಕಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಮನೆಗಳಿಗೆ ಹಾನಿಯಾದ ಪೈಕಿ ಪೂರ್ಣ ಪ್ರಮಾಣದಲ್ಲಿ ಅಂಕೋಲಾದಲ್ಲಿ ಒಂದು ಮನೆ, ತೀವ್ರಹಾನಿ ಅಂಕೋಲಾ ಹಾಗೂ ಹೊನ್ನಾವರದಲ್ಲಿ ತಲಾ 2, ಶಿರಸಿ 1. ಭಾಗಶಃ ಹಾನಿ ಪೈಕಿ ಕಾರವಾರ 7, ಅಂಕೋಲಾ 10, ಕುಮಟಾ 32, ಹೊನ್ನಾವರ 9, ಭಟ್ಕಳ 30 ಸೇರಿದಂತೆ ಒಟ್ಟು 92 ಮನೆಗಳಿಗೆ ಚಂಡಮಾರುತದ ಪರಿಣಾಮ ಉಂಟಾಗಿದೆ.
ಇದನ್ನೂ ಓದಿ: ತೌಕ್ತೆ ಆರ್ಭಟ.. ಮುರುಡೇಶ್ವರನ ಎದುರೇ ಮೂರಾಬಟ್ಟೆಯಾದ ಬದುಕು
ತೋಟಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂಕೋಲಾ 1.37 ಹೆಕ್ಟರ್, ಮುಂಡಗೋಡ 1.5 ಹೆಕ್ಟೇರ್ ಹಾನಿಯಾಗಿದೆ. ಹೆಸ್ಕಾಂ ವಿಭಾಗದಲ್ಲಿ 76 ಕಂಬ, 14 ಟಿಸಿ, ಅಂಕೋಲಾದಲ್ಲಿ 2 ಮೀನುಗಾರಿಕಾ ಬಲೆ, 2 ಬೋಟ್, ಕುಮಟಾ 27 ಬಲೆ, 13 ಬೋಟ್, 112 ವಿದ್ಯುತ್ ಕಂಬ, ಭಟ್ಕಳ 23 ವಿದ್ಯುತ್ ಕಂಬ, 4 ಟಿಸಿ, ಜೊಯಿಡಾದಲ್ಲಿ 25 ಕಂಬ ಬಿದ್ದು ಹಾನಿಯಾಗಿದೆ.
ಚಂಡಮಾರುತದಿಂದ ತೊಂದರೆಗೆ ಸಿಲುಕಿದ ಪ್ರದೇಶದ ಪೈಕಿ ಕುಮಟಾದಲ್ಲಿ 2 ಕಾಳಜಿ ಕೇಂದ್ರ ತೆರೆಯಲಾಗಿದ್ದು, 40 ಜನರು ಆಶ್ರಯ ಪಡೆದಿದ್ದಾರೆ. ಹೊನ್ನಾವರದಲ್ಲಿ 1 ಕೇಂದ್ರ ಇದ್ದು 30 ಜನರಿದ್ದಾರೆ. ಭಟ್ಕಳದಲ್ಲಿ 1 ಕೇಂದ್ರ ತೆರೆದಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇದನ್ನೂ ಓದಿ: ತೌಕ್ತೆ ಎಫೆಕ್ಟ್: ಕರಾವಳಿ ಜಿಲ್ಲೆಗಳಲ್ಲಿ ಮೇ 17 ರಿಂದ 20ರವರೆಗೆ ಎಲ್ಲೋ ಅಲರ್ಟ್