ಕಾರವಾರ: ಲಾರಿ ಮೂಲಕ ಗೋವಾದಿಂದ ಮದ್ಯದ ಬಾಟಲಿಗಳನ್ನು ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಸಿಬ್ಬಂದಿ ಆರೋಪಿ ಸಹಿತ 87 ಸಾವಿರ ಮೌಲ್ಯದ ಮದ್ಯ ವಶಕ್ಕೆ ಪಡೆದರು. ಈ ಘಟನೆ ಕಾರವಾರದ ಮಾಜಾಳಿಯಲ್ಲಿ ನಡೆದಿದೆ.
ಗ್ರಾಮ ಪಂಚಾಯತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆ ಗೋವಾ-ಕರ್ನಾಟಕ ಗಡಿಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ಬಿಗಿಗೊಳಿಸಿದ್ದಾರೆ. ಅದರಂತೆ ಗೋವಾದಿಂದ ಕಬ್ಬಿಣ ತುಂಬಿಕೊಂಡು ಬಂದಿದ್ದ ಆಂಧ್ರಪ್ರದೇಶ ಮೂಲದ 14 ಚಕ್ರದ ಲಾರಿಯ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
60 ರಾಯಲ್ ಸ್ಟ್ಯಾಗ್ ವಿಸ್ಕಿ ಹಾಗೂ 24 ಹೈ ವರ್ಡ್ಸ್ ಫೈನ್ ವಿಸ್ಕಿಯನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಆಂಧ್ರ ಮೂಲದ ರಾಘವೇಂದ್ರ ಪೊಲೀಸರ ವಶದಲ್ಲಿದ್ದಾನೆ. ಅಂದಾಜು 14 ಲಕ್ಷ ಮೌಲ್ಯದ ಲಾರಿ, 12 ಲಕ್ಷದ ಪಿಗ್ ಐರಾನ್, 87 ಸಾವಿರ ಮೌಲ್ಯದ ಗೋವಾ ಮದ್ಯವನ್ನು ಜಪ್ತಿ ಮಾಡಲಾಗಿದೆ.