ಶಿರಸಿ (ಉತ್ತರ ಕನ್ನಡ): ಸುಸಜ್ಜಿತ ಕಟ್ಟಡ, ಪರಿಕರಗಳು ಎಲ್ಲವೂ ಇದ್ದರೂ ಸಹ ವೈದ್ಯರ ಕೊರತೆಯಿಂದ ಶಿರಸಿ ತಾಲೂಕಿನ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಯಿಲೆ ಆವರಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ಬಡ ಜನರಿಗೆ ವೈದ್ಯಕೀಯ ಸೇವೆ ಸಿಗದಂತಾಗಿದೆ.
"ಶಿರಸಿ ತಾಲೂಕಿನಲ್ಲಿ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅದರಲ್ಲಿ 6 ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ. ತಾಲೂಕಿನ ದಾಸನಕೊಪ್ಪ, ರೇವಣಕಟ್ಟ, ಕಕ್ಕಳ್ಳಿ, ಸುಗಾವಿ, ಸಾಲ್ಕಣಿ ಮತ್ತು ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯ ಗಂಭೀರ ಸಮಸ್ಯೆಯಾಗಿದೆ. ಉತ್ತಮ ದರ್ಜೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೂ ಇವುಗಳಲ್ಲಿ ಖಾಯಂ ವೈದ್ಯರಿಲ್ಲ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಚಿಕಿತ್ಸೆಗೆ ಅವಲಂಭಿಸಿದ ಆರೋಗ್ಯ ಕೇಂದ್ರಗಳು ಯಾರ ಪ್ರಯೋಜನಕ್ಕೂ ಇಲ್ಲದಂತಾಗಿದೆ. ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಇಲಾಖೆಯಿಂದ ಸರಿಯಾದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆಯೂ ಸಲ್ಲಿಸಲಾಗಿದೆ. ವೈದ್ಯರ ಕೊರತೆ ನಿಗೀಸಲು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ" ಎನ್ನುತ್ತಾರೆ ಶಿರಸಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್.
ವೈದ್ಯರ ಕೊರತೆ ನೀಗಿಸಲು ಸ್ಥಳೀಯರ ಆಗ್ರಹ: ಈ ಹಿಂದೆ ಹೆಗಡೆಕಟ್ಟಾ ಸೇರಿದಂತೆ ವಿವಿಧೆಡೆ ಪ್ರಾಥಮಿಕ ಕೇಂದ್ರಗಳಲ್ಲಿದ್ದ ವೈದ್ಯರು ವರ್ಗಾವಣೆಗೊಂಡಿದ್ದಾರೆ. ಗ್ರಾಮೀಣ ಭಾಗಕ್ಕೆ ಹೊಸ ವೈದ್ಯರ ನೇಮಕಾತಿಯಾಗದ ಕಾರಣ ನೇರವಾಗಿ ಅದರ ದುಷ್ಪರಿಣಾಮ ಹಳ್ಳಿ ಜನರ ಮೇಲೆ ಬೀರುತ್ತಿದೆ. ಕಕ್ಕಳ್ಳಿ ಶಿರಸಿಯಿಂದ ಅಂದಾಜು 30 ಕಿ.ಮೀ ದೂರದಲ್ಲಿದೆ. ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಸಾಕಷ್ಟಿದೆ. ಸುಗಾವಿ ಮತ್ತು ಹೆಗಡೆಕಟ್ಟಾ ಕೂಡ ನಗರದಿಂದ 15 ಕಿ.ಮೀ. ದೂರದಲ್ಲಿವೆ. ಈ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಿದೆ. ಅಲ್ಲದೇ ದಾಸನಕೊಪ್ಪ ಭಾಗದಲ್ಲಿ 20 ಸಾವಿರಕ್ಕೂ ಅಧಿಕ ಜನರು ಆರೋಗ್ಯ ಕೇಂದ್ರವನ್ನು ನೆಚ್ಚಿಕೊಂಡಿದ್ದರು. ಆದರೆ ಈಗ ಕೇಂದ್ರ ಇದ್ದೂ ಇಲ್ಲದಂತಾಗಿವೆ.
ಸಾಲ್ಕಣಿ, ರೇವಣಕಟ್ಟಾದಲ್ಲೂ ಇದೇ ಸಮಸ್ಯೆಯಿದೆ. ಈ ಭಾಗದಲ್ಲಿ ಗ್ರಾಮಗಳು ಸಾಕಷ್ಟಿವೆ. ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವ ಬಡ ಕುಟುಂಬಗಳೇ ಹೆಚ್ಚಿರುವ ಈ ಪ್ರದೇಶದ ಜನರು ವೈದ್ಯರು ಸಕಾಲಕ್ಕೆ ಸಿಗದ ಪರಿಣಾಮ ತೊಂದರೆಗೆ ಸಿಲುಕಿದ್ದಾರೆ. ಇದರಿಂದ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಬದನಗೋಡ (ದಾಸನಕೊಪ್ಪ) ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಆಗ್ರಹಿಸಿದರು.
ಒಟ್ಟಾರೆಯಾಗಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸುಧಾರಣೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಬನವಾಸಿ, ಬಿಸ್ಲಕೊಪ್ಪ, ಮೆಣಸಿ, ಹುಲೇಕಲ್ಗಳಲ್ಲಿ ಮಾತ್ರ ವೈದ್ಯರಿದ್ದಾರೆ. ಉಳಿದ ಕಡೆ ಕಟ್ಟಡ ನಿರ್ಮಿಸಿ, ಕೆಲವೇ ಸಿಬ್ಬಂದಿ ನಿಯೋಜಿಸುವ ಆರೋಗ್ಯ ಇಲಾಖೆ ಕಾಯಂ ವೈದ್ಯರನ್ನು ನೇಮಿಸಲು ಹಿಂದೇಟು ಹಾಕುತ್ತಿದೆ. ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವ ಮಹತ್ತರ ಜವಾಬ್ದಾರಿ ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ಮೇಲಿದೆ.
ಇದನ್ನೂ ಓದಿ: ಉತ್ತರಕನ್ನಡ: 34 ಜನರಲ್ಲಿ ಇಲಿ ಜ್ವರ ಪತ್ತೆ... ಈ ಕಾಯಿಲೆಯ ಲಕ್ಷಣಗಳೇನು?