ಶಿರಸಿ: ಆನೆಯೊಂದು ತೀವ್ರ ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.
ತಾಲೂಕಿನ ಗುಂಜಾವತಿ ಗ್ರಾಮದ ಅರಳಿಕಟ್ಟೆ ಕೆರೆಯಲ್ಲಿ ಆನೆಯ ಮೂಕರೋಧನೆ ಮನಕಲಕುತ್ತಿದೆ. ಸುಮಾರು 15ರಿಂದ 20 ವರ್ಷದ ಈ ಹೆಣ್ಣಾನೆ ಕಳೆದೆರಡು ದಿನಗಳಿಂದ ಆಹಾರವಿಲ್ಲದೆ, ಜೊತೆಗೆ ಕಿವಿಯಲ್ಲಾಗಿರುವ ಗಾಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಆನೆಯ ಕಿವಿಯಲ್ಲಿ ತೀವ್ರ ಗಾಯವಾಗಿದ್ದು, ಮೇಲಕ್ಕೆಬ್ಬಿಸಲು ಅಸಾಧ್ಯವಾಗಿದೆ.
ಸದ್ಯ ಸ್ಥಳಕ್ಕೆ ಡಿಎಫ್ಓ ಗೋಪಾಲಕೃಷ್ಣ ಹೆಗಡೆ ಭೇಟಿ ನೀಡಿದ್ದಾರೆ. ಆನೆಯನ್ನ ನೀರಿನಿಂದ ಮೇಲಕ್ಕೆತ್ತಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆನೆಗೆ ಚಿಕಿತ್ಸೆ ಕೊಡಿಸಲು ಹಾಗೂ ಆನೆಯನ್ನು ಅಲ್ಲಿಂದ ಮೇಲಕ್ಕೆತ್ತಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಿವಿಗೆ ಗಾಯವಾಗಿ ಇದೀಗ ಹುಳಗಳಾಗಿದೆ, ಅಲ್ಲದೆ ಇದು ಗಂಭೀರ ಸ್ಥಿತಿಗೆ ತಲುಪಿ ಇಡೀ ದೇಹಕ್ಕೂ ಹಬ್ಬತೊಡಗಿದೆ. ನೋವು ತಾಳಲಾಗದೆ ಸದ್ಯ ಕೆರೆಯಲ್ಲಿ ಬಿದ್ದು ಒದ್ದಾಡುತ್ತಿದೆ.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಡಿಎಫ್ಓ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಕಿವಿಯಲ್ಲಿ ಹುಳಗಳು ಬಿದ್ದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆನೆಯನ್ನು ಮೇಲಕ್ಕೆ ಎಬ್ಬಿಸಿ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.