ಭಟ್ಕಳ: ಕೊರೊನಾ ವೈರಸ್ ಜನರನ್ನು ಎಷ್ಟರ ಮಟ್ಟಿಗೆ ಭಯಭೀತರನ್ನಾಗಿಸಿದೆ ಎಂದರೆ ಊರಿನ ರಸ್ತೆಯೊಳಗೆ ಅವರದ್ದೇ ಊರಿನ ಹೊರ ರಾಜ್ಯದ, ಪರ ಊರಿನ ವ್ಯಕ್ತಿಗಳು ಬಾರದೇ ಇರುವ ರೀತಿ ಕಲ್ಲು-ಮುಳ್ಳು, ಮರಗಳನ್ನು ಕಡಿದು ಹಾಕಿ ರಸ್ತೆ ಬಂದ್ ಮಾಡಿರುವ ಘಟನೆ ತಾಲೂಕಿನ ಬೈಲೂರಿನ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಬೈಲೂರು ಗ್ರಾಮದ ಎಲ್ಲಾ ರಾಜಕೀಯ ಮುಖಂಡರು, ಕಾರ್ಯಕರ್ತರಲ್ಲಿ ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದು, ನಮ್ಮ ಗ್ರಾಮದಲ್ಲಿ ಹೊರ ರಾಜ್ಯದಿಂದ ಕೆಲವರು ಬಂದಿದ್ದು ಕಂಡಿರುತ್ತದೆ. ಆದುದರಿಂದ ನಾವೆಲ್ಲರೂ ಸೇರಿ ಅಲ್ಲಲ್ಲಿ ರಸ್ತೆಯನ್ನು ಬಂದ್ ಮಾಡಿಸಿ ಕೊರೊನಾ ರೋಗ ಹರಡದಂತೆ ಕಾಪಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಬರೆದುಕೊಂಡಿದ್ದಾರೆ.
ಇನ್ನು ಹೆದ್ದಾರಿಯಲ್ಲಿ ಪೊಲೀಸ್ ಕಣ್ಗಾವಲಿನಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದ್ದು, ಈಗ ತಾಲೂಕಿನ ಎಲ್ಲಾ ಗಲ್ಲಿ ರಸ್ತೆಗಳಲ್ಲಿಯೂ ಪೊಲೀಸ್ ನಾಕಾಬಂಧಿ ಹಾಕಲಾಗಿದೆ. ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಹಾಗೂ ಪ್ರತಿ ವಾಹನದಲ್ಲಿನ ಜನರನ್ನು ತಪಾಸಣೆ ಮಾಡುತ್ತಿದ್ದಾರೆ. ಸುಮ್ಮನೆ ಊರಿನೊಳಗೆ ಯಾವುದೇ ವಾಹನ ಬಿಡುತ್ತಿಲ್ಲ. ಇನ್ನು ಪೊಲೀಸರು ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸಿ ಓಡಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.