ಕಾರವಾರ: ಹೊನ್ನಾವರ ತಾಲೂಕಿನ ವಂದೂರು ಜಡ್ಡಿಗದ್ದೆಯಲ್ಲಿ ಕಳೆದ 3-4 ತಿಂಗಳಿನಿಂದ ಹಸುಗಳನ್ನು ಭಕ್ಷಿಸುತ್ತಿದ್ದ ಕರಿ ಚಿರತೆಯೊಂದನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೊನ್ನಾವರ ತಾಲೂಕಿನ ಸಾಲ್ಕೋಡ–ಅರೇಂಗಡಿ, ವಂದೂರು ಭಾಗಗಳಲ್ಲಿ ನಿರಂತರವಾಗಿ ಗುಡ್ಡಕ್ಕೆ ಮೇಯಲು ಬಿಟ್ಟ ಹಸುಗಳು ನಾಪತ್ತೆಯಾಗುತ್ತಿದ್ದವು. ಕಡ್ಲೆ, ದುಗ್ಗೂರ, ವಂದೂರು ಗುಡ್ಡದ ಭಾಗದಲ್ಲಿಯೂ ಅನೇಕ ಹಸುಗಳು ಗುಡ್ಡಕ್ಕೆ ಬಿಟ್ಟಾಗ ಕಣ್ಮರೆ ಆಗುತ್ತಿರುವುದರ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಆದರೆ ಚಿರತೆ ಮಾತ್ರ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ.
ಅರಣ್ಯ ಅಧಿಕಾರಿಗಳು ಚಿರತೆ ಕೊಂದು ಹಾಕಿದ ಆಕಳುಗಳ ಸನಿಹದಲ್ಲಿಯೇ ಬೋನು ಇಟ್ಟರೂ ಕರಿ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಆದರೆ ಕಳೆದ ದಿನ ಕೊನೆಗೂ ಕರಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಇದರೊಂದಿಗೆ ಅರಣ್ಯ ಅಧಿಕಾರಿಗಳು ಚಿರತೆ ಬಂಧಿಸಲು ಮಾಡಿದ ತಂತ್ರ ಯಶಸ್ವಿಯಾಗಿದೆ.
ಚಿರತೆಗೆ ಸುಮಾರು 4 ವರ್ಷವಾಗಿದ್ದು, ಇದು ಗಂಡು ಚಿರತೆಯೋ, ಹೆಣ್ಣು ಚೆರತೆಯೋ ಎಂಬುದು ಸ್ಪಷ್ಟವಾಗಿಲ್ಲ. ಚಿರತೆ ಆರೋಗ್ಯವಾಗಿದ್ದು, ಅದನ್ನು ರಾತ್ರಿ ಸ್ಥಳಾಂತರಿಸಲಾಗಿತ್ತು. ಕರಿ ಚಿರತೆಯೊಂದು ಮುಗ್ವಾ ಗ್ರಾಮದ ಮೂರಕಟ್ಟೆ ಭಾಗದ ಡಿಎಫ್ಒ ಕಚೇರಿಯ ಹಿಂದುಗಡೆ ಸುತ್ತಾಡುತ್ತಿರುವ ಬಗ್ಗೆ ಹಲವರು ಅರಣ್ಯ ಇಲಾಖೆಗೆ 1 ವರ್ಷದ ಹಿಂದೆ ಮಾಹಿತಿ ನೀಡಿದ್ದರು. ಆದರೆ ಚಿರತೆ ಪತ್ತೆಯಾಗಿರಲಿಲ್ಲ. ಡಿಎಫ್ಒ ಕಚೇರಿ ಸನಿಹದಲ್ಲಿ ಓಡಾಡುತ್ತಿದ್ದ ಚಿರತೆಯೇ ಈ ಕರಿ ಚಿರತೆ ಇರಬಹುದೆಂದು ಅಂದಾಜಿಸಲಾಗಿದೆ.
ಸ್ಥಳೀಯರ ಆಕ್ರೋಶ: ಹಿಡಿದ ಚಿರತೆಯನ್ನು ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸದೇ ಅರಣ್ಯ ಅಧಿಕಾರಿಗಳು ಅದರ ಪ್ರದೇಶವನ್ನು ಮಾತ್ರ ಬದಲಾಯಿಸಿ ಹತ್ತಿರದ ಅರಣ್ಯದಲ್ಲಿ ಬಿಡುತ್ತಿದ್ದಾರೆ. ಇದರಿಂದಾಗಿ ಇಲ್ಲಿ ಚಿರತೆಗಳ ಹಾವಳಿ ಜಾಸ್ತಿಯಾಗುತ್ತಿದೆ. ಆದ್ದರಿಂದ ಹಿಡಿದ ಚಿರತೆಗಳನ್ನು ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿ ಜನರನ್ನು ಮತ್ತು ಜಾನುವಾರುಗಳನ್ನು ಪ್ರಾಣಿಗಳ ದಾಳಿಯಿಂದ ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಆದ್ರೆ ಕಳೆದ ರಾತ್ರಿ ಈ ಕರಿ ಚಿರತೆಯನ್ನು ಎಲ್ಲಿ ಬಿಟ್ಟಿದ್ದಾರೆ ಎಂಬುದು ಇನ್ನು ಅಸ್ಪಷ್ಟವಾಗಿದೆ.
ಓದಿ: ತಾಯಿಯಿಂದ ಬೇರ್ಪಟ್ಟ ಕರಿ ಚಿರತೆ ಮರಿ : ಕರುಳಬಳ್ಳಿಗಾಗಿ ಹುಡುಕಾಡಿದ ತಾಯಿ
ಜನರಿಗೆ ಘರ್ಜಿಸಿದ ಕರಿ ಚಿರತೆ: ಇನ್ನು ಕರಿ ಚಿರತೆ ಬೋನಿಗೆ ಬಿದ್ದ ಸುದ್ದಿ ಅರಣ್ಯ ಇಲಾಖೆ ತಿಳಿದಿದ್ದು, ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದರು. ಅದರಂತೆ ಈ ಸುದ್ದಿ ಸುತ್ತ-ಮುತ್ತ ನಾಲ್ಕೈದು ಗ್ರಾಮಕ್ಕೂ ತಿಳಿದಿದ್ದು, ಕರಿ ಚಿರತೆಯನ್ನು ನೋಡಲು ಆಗಮಿಸಿದ್ದರು. ಗ್ರಾಮಸ್ಥರು ಬೋನಿನಲ್ಲಿದ್ದ ಕರಿ ಚಿರತೆಯ ವಿಡಿಯೋ ಮಾಡಲು ಮುಂದಾಗಿದ್ದು, ಈ ವೇಳೆ ಬೋನಿನಲ್ಲಿದ್ದ ಚಿರತೆ ಜನರ ಮೇಲೆ ಘರ್ಜಿಸಿ ದಾಳಿ ಮಾಡಲು ಮುಂದಾಗಿತ್ತು. ಕರಿ ಚಿರತೆಯ ಘರ್ಜನೆಗೆ ಜನರು ಹೌಹಾರಿದ್ದರು. ಬಳಿಕ ಗ್ರಾಮಸ್ಥರು ವಿಡಿಯೋ ತೆಗೆದುಕೊಳ್ಳಲು ಹಿಂದೇಟು ಹಾಕಿದರು. ಇನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ಕರಿ ಚಿರತೆಯ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.