ಕಾರವಾರ (ಉತ್ತರ ಕನ್ನಡ): ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನಿಲ್ ಹೆಗಡೆ ವಿರುದ್ಧ ಸುಮಾರು 3,500 ಮತಗಳ ಅಂತರದಿಂದ ಗೆಲುವು ಪಡೆಯುವ ಮೂಲಕ 9ನೇ ಬಾರಿ ಗೆದ್ದು ಬೀಗಿದ್ದಾರೆ. ಇವರು ಒಟ್ಟು 57,240 ಮತಗಳನ್ನು ಪಡೆದಿದ್ದು, ಸುನಿಲ್ ಹೆಗಡೆ 53,617 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜಿ.ಎಸ್ ಲಕ್ಷಣ್ ಅವರಿಗೆ 28,682 ಮತ ಸಿಕ್ಕಿದೆ.
ರಾಜ್ಯದ ಅತ್ಯಂತ ಹಿರಿಯ ಶಾಸಕ ಹಾಗೂ ಅತಿ ಹೆಚ್ಚು ಬಾರಿ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿರುವವರ ಪೈಕಿ ಒಬ್ಬರಾಗಿರುವ ದೇಶಪಾಂಡೆ, ಹಳಿಯಾಳ ವಿಧಾನಸಭಾ ಕ್ಷೇತ್ರದಿಂದಲೇ 9ನೇ ಬಾರಿ ಸ್ಪರ್ಧಿಸಿದ್ದು ವಿಶೇಷ. ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ನ ಪ್ರಮುಖ ನೇತಾರ, ಹಿರಿಯ ಮುಖಂಡ, ಮುತ್ಸದ್ಧಿ ರಾಜಕಾರಣಿ. ಮಾತ್ರವಲ್ಲದೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕರಲ್ಲಿ ದೇಶಪಾಂಡೆ ಕೂಡ ಒಬ್ಬರು. 'ಶಾಸಕ ಸದನದ ದೊಡ್ಡಣ್ಣ' ಎಂದೇ ಗುರುತಿಸಿಕೊಳ್ಳುವ ದೇಶಪಾಂಡೆಗೆ ಹಳಿಯಾಳ ವಿಧಾನಸಭಾ ಕ್ಷೇತ್ರ ಭದ್ರಕೋಟೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರೂ ಹಳಿಯಾಳವನ್ನು ವಶಪಡಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ.
ದೇಶಪಾಂಡೆ ಅವರ ಪೂರ್ಣ ಹೆಸರು ರಘುನಾಥ ವಿಶ್ವನಾಥ ದೇಶಪಾಂಡೆ. 1947ರ ಮಾರ್ಚ್ 16ರಂದು ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ತಂದೆ ವಿಶ್ವನಾಥ ರಾವ್, ತಾಯಿ ವಿಮಲಾ ಬಾಯಿ. ದೇಶಪಾಂಡೆ ಕಾನೂನು ಪದವೀಧರರಾಗಿದ್ದು, ರಾಜ್ಯ ಕಂಡ ಮುತ್ಸದ್ಧಿ ರಾಜಕಾರಣಿಗಳಲ್ಲಿ ಒಬ್ಬರು. ದೇಶಪಾಂಡೆ ಮತ್ತು ರಾಧಾ ಆರ್.ದೇಶಪಾಂಡೆ ದಂಪತಿಗೆ ಪ್ರಸಾದ್ ದೇಶಪಾಂಡೆ, ಪ್ರಶಾಂತ್ ದೇಶಪಾಂಡೆ ಎಂಬ ಇಬ್ಬರು ಪುತ್ರರಿದ್ದಾರೆ.
ರಾಜಕೀಯಕ್ಕೆ ಧುಮುಕಿದ ಬಳಿಕ ಇದೇ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಇವರ ಹೆಗ್ಗಳಿಕೆ. ಈ ಹಿಂದೆ ಸಣ್ಣ ಕೈಗಾರಿಕೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ತೋಟಗಾರಿಕೆ, ಕಂದಾಯ, ಕೌಶಲ್ಯಾಭಿವೃದ್ಧಿ ಸೇರಿದಂತೆ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ಬೆಳೆದ ಆರ್.ವಿ.ದೇಶಪಾಂಡೆ ಅವರು ಕನಿಷ್ಠ ಸುಮಾರು 10ಕ್ಕೂ ಹೆಚ್ಚು ಮುಖ್ಯಮಂತ್ರಿಗಳ ಜೊತೆ ಕಾರ್ಯನಿರ್ವಹಿಸಿದ್ದಾರೆ. ಪ್ರತಿಪಕ್ಷ ನಾಯಕರಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, 2004ರಲ್ಲಿ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸದನದ ಚೌಕಟ್ಟು ಮೀರದಂತೆ ಮಾತನಾಡುವ ಅವರ ಅನುಭವ, ಜ್ಞಾನ ಅಪಾರವಾದುದು.
ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟಿ ಹಾಗೂ ಹಳಿಯಾಳದಲ್ಲಿ ತುಳಜಾ ಭವಾನಿ ದೇವಸ್ಥಾನ ನಿರ್ಮಿಸುವ ಮೂಲಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಸೇವೆ ಮಾಡುತ್ತಿದ್ದಾರೆ. ಕೆನರಾ ಮೆಡಿಕಲ್ ಸೆಂಟರ್ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಹಳಿಯಾಳದ ರುಡ್‍ಸೆಟ್ ಸಂಸ್ಥೆಯ ಮೂಲಕ ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನೀಡಿರುವುದು ಇವರ ಸಮಾಜಮುಖಿ ಕಾರ್ಯಗಳಿಗೊಂದು ಉದಾಹರಣೆ.
ಇದನ್ನೂ ಓದಿ : ಗೆದ್ದರೂ ಬಿಕ್ಕಿ ಬಿಕ್ಕಿ ಅತ್ತ ಬಿಜೆಪಿ ಅಭ್ಯರ್ಥಿ ಪ್ರಭು ಚೌಹಾಣ್..