ಕಾರವಾರ: ರಾಜ್ಯವನ್ನು ಬಿಡದೆ ಕಾಡುತ್ತಿರುವ ಮಹಾರಾಷ್ಟ್ರದ ನಂಜು ದಿನ ಕಳೆದಂತೆ ರಾಜ್ಯದ ಉದ್ದಗಲಕ್ಕೂ ಹರಡತೊಡಗಿದೆ. ಇಂತಹದೇ ಸ್ಥಿತಿ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಂಡು ಬರುತ್ತಿದ್ದು, ಮಹಾರಾಷ್ಟ್ರದಿಂದ ಬಂದವರನ್ನು ಕ್ವಾರಂಟೈನ್ ಮಾಡುವುದೇ ದೊಡ್ಡ ತಲೆಬಿಸಿಯಾಗಿದೆ. ಅಲ್ಲದೆ ಕ್ವಾರಂಟೈನ್ ಮಾಡಲೆಂದು ನಿಗದಿ ಮಾಡಿದ ಲಾಡ್ಜ್ಗಳಲ್ಲಿಯೂ ಹೊರ ರಾಜ್ಯದಿಂದ ಬಂದವರನ್ನು ನಿರಾಕರಿಸಲಾಗುತ್ತಿದ್ದು, ತಾಯ್ನಾಡಿಗೆ ಬಂದು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಕಳೆದ ಮೂರು ತಿಂಗಳಿಂದ ಕೋವಿಡ್-19 ವೈರಸ್ ಎಲ್ಲರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಮಹಾಮಾರಿಯ ಉಪದ್ರವದಿಂದಾಗಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಲಾಕ್ಡೌನ್ ಸಡಿಲಿಕೆ ನಂತರ ತಾಯ್ನಾಡಿಗೆ ಬಂದವರು ಕಡ್ಡಾಯವಾಗಿ ಕ್ವಾರಂಟೈನ್ ಆಗಲೇಬೇಕಿತ್ತು. ಇದಕ್ಕಾಗಿ ಶಾಲೆ, ಛತ್ರಗಳು, ಲಾಡ್ಜ್ಗಳನ್ನು ಸ್ಥಳೀಯ ಆಡಳಿತ ನಿಗದಿ ಮಾಡಿತ್ತು. ಅಲ್ಲಿಯೇ 14 ದಿನ ಪೂರೈಸಿ ಮನೆಗೆ ತೆರಳುತ್ತಿದ್ದರು. ಆದರೆ ಈಗ ಲಾಕ್ಡೌನ್ ಸಡಿಲಿಕೆ ಆದ ಮೇಲೆ ವಲಸಿಗರ ಕಥೆ ಹೇಳತೀರದಾಗಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್ ಮಾಡಬೇಕಂದ್ರೆ ಲಾಡ್ಜ್ಗಳಲ್ಲಿ ರೂಮ್ ಕೂಡ ಸಿಗುತ್ತಿಲ್ಲ. ಕಾರವಾರದಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ನಿಗದಿ ಮಾಡಿದ ಲಾಡ್ಜ್ಗಳಲ್ಲಿ ಕ್ವಾರಂಟೈನ್ಗೆ ನೀಡಲು ಒಪ್ಪುತ್ತಿಲ್ಲ. ನಮ್ಮ ಜಿಲ್ಲೆಯಲ್ಲಿಯೇ ನಮಗೆ ಉಳಿಯಲು ಅವಕಾಶ ನೀಡದೆ ಇದ್ದಲ್ಲಿ ನಾವು ಎಲ್ಲಿ ಹೋಗಬೇಕು ಎನ್ನುವುದು ಹೊರ ರಾಜ್ಯದಿಂದ ಬಂದವರ ಪ್ರಶ್ನೆಯಾಗಿದೆ.
ಲಾಕ್ಡೌನ್ ಸಡಿಲಿಕೆ ಬಳಿಕ ಕೆಲ ಲಾಡ್ಜ್ಗಳಲ್ಲಿ ಕ್ವಾರಂಟೈನ್ಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಹೀಗೆ ಕ್ವಾರಂಟೈನ್ ಇದ್ದವರು ಖಾಲಿಯಾದ ಬಳಿಕ ಲಾಡ್ಜ್ಗಳಲ್ಲಿ ಸ್ವಚ್ಛತೆ ಮಾಡಿ ಸ್ಯಾನಿಟೈಸರ್ ಹಾಕಿ ಕ್ಲೀನ್ ಮಾಡಲಾಗಿದೆ. ಪ್ರವಾಸೋದ್ಯಮ ಕೂಡ ಪ್ರಾರಂಭವಾಗಿದ್ದರಿಂದ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ತಮ್ಮ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂಬ ನೆಪವೊಡ್ಡಿ ಕೆಲವು ಲಾಡ್ಜ್ನಲ್ಲಿ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ಕಾರವಾರ ಮಾತ್ರವಲ್ಲದೆ ಜಿಲ್ಲೆಯ ಕೆಲವು ಭಾಗದಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದಿಂದ ಬಂದವರನ್ನು ಅಸ್ಪೃಶ್ಯರಂತೆ ನೋಡಲಾಗುತ್ತಿದೆ. ಇತ್ತ ಖಾಸಗಿಯಾಗಿ ಕ್ವಾರಂಟೈನ್ ಸಹ ಆಗಲು ಸಾಧ್ಯವಾಗದೇ ಸ್ಥಳೀಯ ಆಡಳಿತಕ್ಕೆ ದೂರು ಸಹ ನೀಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನ ಕೇಳಿದ್ರೆ, ಯಾರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡುತ್ತಿಲ್ಲವೋ ಅವರಿಗೆ ಹೀಗೆ ಸಮಸ್ಯೆಯಾಗುತ್ತಿದೆ. ಕ್ವಾರಂಟೈನ್ಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅನ್ಯ ರಾಜ್ಯಗಳಿಂದ ಬಂದವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎನ್ನುತ್ತಾರೆ ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರಾ.