ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯನ್ನು ತಾಲೂಕಾಗಿ ಮಾರ್ಪಾಡಿಸಬೇಕು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿ ಬನವಾಸಿಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಬನವಾಸಿ ಹೋರಾಟ ಸಮಿತಿ ನೇತೃತ್ವದಲ್ಲಿ,ಬನವಾಸಿಯ ಮಧುಕೇಶ್ವರ ದೇವಾಲಯದಿಂದ ಪಂಪ ವೃತ್ತದವರೆಗೆ ಸಾವಿರಾರು ಜನ ಬೃಹತ್ ಮೆರವಣಿಗೆ ನಡೆಸಿದರು. ಬನವಾಸಿ ಹೋಬಳಿಯನ್ನು ಜಿಲ್ಲೆಯಿಂದ ಬೇರ್ಪಡಿಸುವ ಪ್ರಸ್ತಾವನೆ ವಿರೋಧಿಸಿ ಧಿಕ್ಕಾರ ಕೂಗಿ, ಬನವಾಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಳಿಯಬೇಕು ಎಂದು ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬನವಾಸಿ ಭಾಗದ 10 ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, 72ಕ್ಕೂ ಅಧಿಕ ಹಳ್ಳಿಯ ಜನರು, ಸ್ವಯಂ ಸೇವಾ ಸಂಘಗಳು, ಮಹಿಳಾ ಸಂಘದ ಪ್ರಮುಖರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸೇರಿ ಪ್ರತಿಭಟನೆಯನ್ನು ನಡೆಸಿದರು. ಬನವಾಸಿಯನ್ನು ತಾಲೂಕಾಗಿ ರಚನೆ ಮಾಡಿ, ಶಿರಸಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು ಎಂದು ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮೂಲಕ ಮನವಿ ಸಲ್ಲಿಸಿದರು.