ಶಿರಸಿ: ಯಲ್ಲಾಪುರ ತಾಲೂಕಾ ಘಟಕದ ಜೆಡಿಎಸ್ ಅಧ್ಯಕ್ಷ ರವಿಚಂದ್ರ ನಾಯ್ಕ ಮೇಲೆ ಹಲ್ಲೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಕಳೆದ ವಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ನಡೆಸಿದರು. ಅಗಸ್ಟ್ 15 ರಂದು ಬೆಳಗಿನ ಜಾವ 2.30ಕ್ಕೆ ಮನೆಯಲ್ಲಿ ಮಲಗಿದವರ ಪೋನ್ಗೆ ಕರೆ ಮಾಡಿ ಅರ್ಧ ಗಂಟೆಯಲ್ಲಿ ಅವರ ಮನೆಗೆ ಬಂದು ಎಬ್ಬಿಸಿ ಎಳೆದು ತಂದು ಮನ ಬಂದಂತೆ ಥಳಿಸಿ ಭುಜ, ಕುತ್ತಿಗೆ ಮಧ್ಯದ ಎಲುಬನ್ನು ಮುರಿದಿದ್ದಾರೆ. ಅಲ್ಲದೆ ಕಟ್ಟಿಗೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದರು.
ಇದರ ಸತ್ಯಾಸತ್ಯತೆ ಅರಿಯಲು ರವಿಚಂದ್ರ ಅವರ ಫೋನ್ಗೆ ಬಂದ ಕರೆಯ ಮಾಹಿತಿ, ಲೊಕೇಶನ್ ಹಾಗೂ ಮನೆ ಎದುರಿನ ಹಿಂದುಳಿದ ವರ್ಗದ ವಸತಿ ನಿಲಯದ ಸಿಸಿಟಿವಿ ಫುಟೇಜ್ ಪರಿಶೀಲಿಸಬೇಕು. ಜೊತೆಗೆ ಸಂಬಂಧಿಸಿದ ಸಿಬ್ಬಂದಿಯನ್ನು ಅಮಾನತಿನಲ್ಲಿರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.