ಕಾರವಾರ: ಕಾಳಿ ಉತ್ತರಕನ್ನಡ ಜಿಲ್ಲೆಯ ಜೀವನದಿ. ಇಲ್ಲಿನ ಗುಡ್ಡವೊಂದರಲ್ಲಿ ಹುಟ್ಟಿ ಪಶ್ಚಿಮ ಘಟ್ಟಗಳ ಮೂಲಕ ಅರಬ್ಬಿ ಸಮುದ್ರ ಸೇರುವ ನದಿ ಸಾವಿರಾರು ಕುಟುಂಬಗಳಿಗೆ ಇಂದಿಗೂ ನೀರುಣಿಸುತ್ತಿದೆ. ಆದರೆ ಇಂತಹ ನದಿಯನ್ನು ತಿರುಗಿಸಿ ಬೇರೆಡೆ ಕೊಂಡೊಯ್ಯುವ ಹುನ್ನಾರ ನಡೆದಿದ್ದು, ಇದು ಜಿಲ್ಲೆಯ ಜನರನ್ನು ಕೆರಳಿಸುವಂತೆ ಮಾಡಿದೆ.
ಹೌದು, ಕಾಳಿ ನದಿಯನ್ನು ತಿರುಗಿಸಿ ಉತ್ತರಕರ್ನಾಟಕದ ಘಟಪ್ರಭಾ, ಮಲಪ್ರಭಾ ನದಿಗಳಿಗೆ ಜೋಡಣೆ ಮಾಡಿ ಆ ಮೂಲಕ ಬೆಳಗಾವಿ ಹಾಗೂ ಬಾಗಲಕೋಟೆಗಳಿಗೆ ನೀರು ಹರಿಸುವ ಯೋಜನೆ ಸಿದ್ದಪಡಿಸಲಾಗುತ್ತಿದೆ. ಆದರೆ ಜೊಯೀಡಾ ತಾಲೂಕಿನ ಡಿಗ್ಗಿಯಲ್ಲಿ ಹುಟ್ಟಿ ನೈಸರ್ಗಿಕವಾಗಿ ಹರಿದು ಅರಬ್ಬಿ ಸಮುದ್ರ ಸೇರುವ ಇಂತಹ ಕಾಳಿ ನದಿ ತಿರುವಿಗೆ ಇದೀಗ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಜೊಯೀಡಾದಲ್ಲಿ ಕಾಳಿ ಬ್ರಿಗೇಡ್ ಮತ್ತು ವ್ಯಾಪಾರಸ್ಥರ ಸಂಘವು ಕರೆ ಕೊಟ್ಟಿದ್ದ ಬಂದ್ ಗೆ ಇಂದು ಭಾರಿ ಬೆಂಬಲ ವ್ಯಕ್ತವಾಗಿದೆ. ಪಟ್ಟಣದಲ್ಲಿ ಸಂಪೂರ್ಣ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಇಲ್ಲಿನ ಶಿವಾಜಿ ಸರ್ಕಲ್ ಬಳಿ ಬಹಿರಂಗ ಸಭೆ ನಡೆಸಿದರು. ನಂತರ ತಹಶೀಲ್ದಾರ ಕಚೇರಿವರೆಗೆ ಬೃಹತ್ ಪ್ರತಿಭಟನ ಮೆರವಣಿಗೆ ನಡೆಸಿದ ಜನರು ತಹಸೀಲ್ದಾರ್ ಮೂಲಕ ಪ್ರಧಾನಿಗೆ, ಮುಖ್ಯಮಂತ್ರಿಗೆ ಹಾಗೂ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸೂಪಾ ಡ್ಯಾಂ ನಿರ್ಮಾಣದ ಬಳಿಕ ಕಾಳಿ ನದಿಯಂಚಿನಲ್ಲಿದ್ದ ಸುಮಾರು 47 ಹಳ್ಳಿಗಳು ನೆಲೆ ಕಳೆದುಕೊಂಡಿವೆ. ಆದರೆ ಅವರಿಗೆ ಇಂದಿಗೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಆದರೆ ಇದೀಗ ಜನರ ಗಮನಕ್ಕೆ ತರದೇ ಕಾಳಿ ನದಿಯನ್ನು ತಿರುಗಿಸುವ ಯೋಜನೆ ಸಿದ್ದಪಡಿಸಲಾಗುತ್ತಿದೆ. ಆದರೆ ಇಂತಹ ಅವೈಜ್ಞಾನಿಕ ಕ್ರಮದಿಂದಾಗಿ ಕಾಳಿ ನದಿಯನ್ನೆ ಜೀವನದಿಯನ್ನಾಗಿಸಿಕೊಂಡು ಬದುಕುತ್ತಿದ್ದವರು ಬೀದಿಗೆ ಬರುವ ಆತಂಕ ಎದುರಾಗಿದೆ. ಯಾವುದೇ ಯೋಜನೆ ಜಾರಿ ಮಾಡುವ ಮೊದಲು ಸ್ಥಳೀಯರೊಂದಿಗೆ ಅಹವಾಲು ಸಭೆ ನಡೆಸಬೇಕು. ಆದರೆ ಸುಮಾರು 5 ಸಾವಿರ ಕೋಟಿ ವೆಚ್ಚದ 40 ಟಿಎಂಸಿ ನೀರು ಕೊಂಡೊಯ್ಯುವ ಈ ಯೋಜನೆ ಬಗ್ಗೆ ಎಲ್ಲಿಯೂ ಮಾಹಿತಿ ನೀಡದೆ ಗುಪ್ತವಾಗಿ ನಡೆಸಲಾಗುತ್ತಿದೆ.
ಕಳೆದ 40 ವರ್ಷಗಳಿಂದ ಜೊಯೀಡಾ ಜನರು ನೀರಿಗಾಗಿ ಒತ್ತಾಯಿಸುತ್ತಿದ್ದಾರೆ. ಆದರೆ ನಮಗೆ ನೀರು ನೀಡದೆ ಬೇರೆಯವರಿಗೆ ನೀಡಲು ಮುಂದಾಗಿದ್ದಾರೆ. ಆದರೆ ಕಾಳಿಯಿಂದ ಹನಿ ನೀರನ್ನು ನೀಡುವುದಿಲ್ಲ ಎನ್ನುತ್ತಾರೆ ಕಾಳಿ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ರವಿ ರೇಡ್ಕರ್.
ಕಾಳಿ ನದಿ ಹರಿವಿನಲ್ಲಿ ಒಟ್ಟು ಐದು ಅಣೆಕಟ್ಟುಗಳು ಬರಲಿದ್ದು, ಇವುಗಳ ಮೂಲಕ ರಾಜ್ಯಕ್ಕೆ ವಿದ್ಯುತ್ ಒದಗಿಸುವ ಕೆಲಸವಾಗುತ್ತಿದೆ. ನೀರು ಕಡಿಮೆ ಆದಲ್ಲಿ ಇಲ್ಲಿ ವಿದ್ಯುತ್ ಉತ್ಪಾದನೆಯಾಗುವುದಿಲ್ಲ. ಆದರೆ ಇಂತಹ ನೈಸರ್ಗಿಕವಾಗಿ ಹರಿಯುವ ನದಿಯನ್ನು ಸಕ್ಕರೆ ಕಾರ್ಖಾನೆ ಮಾಲಿಕರ ಲಾಭಿಗೆ ಮಣಿದ ಸರ್ಕಾರ ತಿರುಗಿಸಲು ಮುಂದಾಗಿರುವುದು ಅವೈಜ್ಞಾನಿಕ ಯಾವುದೇ ಕಾರಣಕ್ಕೂ ಇಲ್ಲಿನ ಹನಿ ನೀರನ್ನು ಒಯ್ಯಲು ಬಿಡುವುದಿಲ್ಲ. ಅವಶ್ಯವಿದ್ದಲ್ಲಿ ಜೀವನದಿಯ ಉಳುವಿಗಾಗಿ ಜಿಲ್ಲೆಯ 11 ತಾಲೂಕುಗಳ ಮೂಲಕ ಬೃಹತ್ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ದಾಂಡೇಲಿ ನಗರಸಭೆ ಸದಸ್ಯ ಮೋಹನ್.
ಜೊಯೀಡಾ ತಾಲೂಕು ಇನ್ನು ಅಭಿವೃದ್ಧಿ ಕಂಡಿಲ್ಲ. ಇಲ್ಲಿನ ಬಹುತೇಕರು ಕೃಷಿಯನ್ನು ನಂಬಿ ಬದುಕುತ್ತಿದ್ದಾರೆ. ಅಲ್ಲದೆ ಪ್ರವಾಸೋದ್ಯಮ ಕೂಡ ಬೆಳವಣಿಗೆ ಕಾಣುತ್ತಿದೆ. ಆದರೆ ಇದೆಲ್ಲದಕ್ಕೂ ಕಾಳಿ ನದಿಯೇ ಕಾರಣವಾಗಿದ್ದು, ಇಂತಹ ನದಿಯನ್ನು ಅವೈಜ್ಞಾನಿಕವಾಗಿ ತಿರುಗಿಸಿದಲ್ಲಿ ಸಂಕಷ್ಟ ಎದುರಿಸಬೇಕಾದ ಸ್ಥಿತಿ ಇದೆ.
ಒಟ್ಟಿನಲ್ಲಿ ಕಾಳಿನದಿಯನ್ನು ತಿರುಗಿಸಿ ಬಯಲುಸೀಮೆಗೆ ನೀರು ಹರಿಸಲು ಸದ್ದಿಲ್ಲದೆ ನಡೆಯುತ್ತಿರುವ ಯೋಜನೆಗೆ ಜಿಲ್ಲೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗತೊಡಗಿದೆ. ಜೀವನಾಡಿ ಯಾಗಿರುವ ನದಿಯನ್ನು ತಿರುಗಿಸಿದಲ್ಲಿ ಈ ಭಾಗದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಕೈಗಾ, ಕದ್ರಾ, ಸೇರಿದಂತೆ ವಿವಿಧ ಬೃಹತ್ ಯೋಜನೆಗಳಿಗೆ ತೊಂದರೆಯಾಗಲಿದೆ.