ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಕುರಿತಂತೆ ಮಾಡಿರುವ ಟ್ವೀಟ್ ಹೇಳಿಕೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಮಧ್ಯಪ್ರದೇಶದ ಭೂಪಾಲ್ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಗಾಂಧಿ ಕೊಂದ ಗೋಡ್ಸೆಯನ್ನು ದೇಶಭಕ್ತ ಎಂದು ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿ ಸಚಿವ ಹೆಗಡೆ ಟ್ವೀಟ್ ಮಾಡಿದ್ದರು. ಸಚಿವ ಈ ನಡೆ ಖಂಡಿಸಿ ನಗರದ ಬಿಡ್ಕಿಬೈಲಿನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಬಾಯಿ ಚಪಲಕ್ಕೋಸ್ಕರ ಬೇಕಾಬಿಟ್ಟಿ ಮಾತನಾಡುವ ಇಂತವರಿಗೆ ಸಮಾಜ ತಕ್ಕ ಪಾಠ ಕಲಿಸಬೇಕು. ಸಚಿವ ಅನಂತಕುಮಾರ ಹೆಗಡೆ, ಸಂಸದ ನಳೀನ್ ಕುಮಾರ್ ಅವರು ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ. ಬಿಜೆಪಿಗೆ ನೈತಿಕತೆ ಇದ್ದರೇ ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.