ಕಾರವಾರ: ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ತಂಬಾಕು ಹಾಗೂ ಮದ್ಯದಂತಹ ಮಾದಕ ವಸ್ತುಗಳನ್ನ ಮಾರಾಟ ಅಥವಾ ಸೇವನೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಶಾಲೆಯ 100 ಮೀಟರ್ ಒಳಗೇ ಮದ್ಯದಂಗಡಿ ತೆರೆಯಲು ಸುಳ್ಳು ಮಾಹಿತಿ ನೀಡಿದ್ದು, ಖುದ್ದು ಶಾಸಕರೇ ತಮ್ಮ ಅಧಿಕೃತ ಪತ್ರದ ಮೂಲಕ ಅಂಗಡಿಗೆ ಪರವಾನಗಿ ನೀಡುವಂತೆ ಶಿಫಾರಸು ಮಾಡಿದ್ದಾರೆ ಎನ್ನಲಾಗ್ತಿದ್ದು, ಇದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಹುಬ್ಬಣಗೇರಿ ಗ್ರಾಮದಲ್ಲಿ ಎಂಎಸ್‌ಐಎಲ್ ಮಳಿಗೆ ತೆರೆಯಲು ವ್ಯಕ್ತಿಯೋರ್ವರು ಅರ್ಜಿ ಸಲ್ಲಿಸಿದ್ದಾರೆ. ಈ ವ್ಯಕ್ತಿ ಬಾಡ ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿರುವ ಕಾರಣ, ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯೇ ಅಬಕಾರಿ ಇಲಾಖೆಗೆ ಪರವಾನಗಿಗಾಗಿ ಶಿಫಾರಸು ಪತ್ರ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲೆಯ ಸಮೀಪದಲ್ಲಿ ಎಂಎಸ್‌ಐಲ್ ಮಳಿಗೆ ತೆರೆಯಲು ಇದೀಗ ಭಾರಿ ವಿರೋಧ ವ್ಯಕ್ತವಾಗಿದೆ.
ಚುಟುಕು ಬ್ರಹ್ಮ ದಿನಕರ ದೇಸಾಯಿಯವರು ಕೆನರಾ ವೆಲ್ಫೇರ್ ಟ್ರಸ್ಟ್ನ ಮೂಲಕ ಬಾಡ ಗ್ರಾಮದಲ್ಲಿ ಜನತಾ ವಿದ್ಯಾಲಯವನ್ನ 1945ರಲ್ಲಿ ತೆರೆದಿದ್ದರು. ಉದ್ದೇಶಿತ ಎಂಎಸ್‌ಐಎಲ್ ಮಳಿಗೆಗೂ ಈ ಶಾಲೆಯ ಕಾಂಪೌಂಡ್‌ಗೂ ಇರುವ ನೇರ ಅಂತರ ಕೇವಲ 60 ಮೀಟರ್. ಅಬಕಾರಿ ನಿಯಮದ ಪ್ರಕಾರ, ಏರಿಯಲ್ ಸರ್ವೆ ಮಾಡಿದರೂ ಕೂಡ ಕನಿಷ್ಠ ಅಂತರ 100 ಮೀಟರಾದರೂ ಇರಬೇಕು. ಆದರೆ, ಈ ನಿಯಮವನ್ನ ಇಲ್ಲಿ ಗಾಳಿಗೆ ತೂರಿ, ಪರವಾನಗಿ ಪಡೆಯುವ ಹುನ್ನಾರದಿಂದ ಎಂಎಸ್ಐಎಲ್ ಮಳಿಗೆ ಪ್ರವೇಶ ದ್ವಾರವನ್ನ ಖಾಸಗಿಯವರ ಜಾಗದ ಕಡೆಗೆ ತೋರಿಸಿ ಅಲ್ಲಿಂದ ಶಾಲೆಗೆ 100 ಮೀಟರ್ ದೂರವಿದೆ ಎಂದು ತೋರಿಸಲಾಗಿದೆಯಂತೆ.
ಆದರೆ, ಅಸಲಿಗೆ ಹೇಗೆ ಮಾರ್ಗ ನೀಡಿದರೂ ಸಹ ಉದ್ದೇಶಿತ ಎಂಎಸ್ಐಎಲ್ ಮಳಿಗೆಯಿಂದ ಶಾಲೆ 100 ಮೀಟರ್ ಅಂತರದ ಒಳಗೆ ಬರುತ್ತಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಇಲ್ಲಿ ಹೆಂಡದ ಮಳಿಗೆ ಬೇಡ ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ. ಈ ಎಂಎಸ್ಐಎಲ್‌ಗೆ ಪರವಾನಗಿ ಪಡೆಯಲು ಕಾನೂನಿನ ನಿಯಮಗಳನ್ನೇ ಗಾಳಿಗೆ ತೂರಿದ್ದು, ಗ್ರಾಮದ ನಕ್ಷೆಯನ್ನೇ ತಿದ್ದುಪಡಿ ಮಾಡಿ ಅಬಕಾರಿ ಇಲಾಖೆಗೆ ಸಲ್ಲಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ತಯಾರಿಸಿರುವ ಈ ನಕ್ಷೆಯಲ್ಲಿ ಶಾಲೆಯ ಸುಳಿವೇ ಇಲ್ಲ. ಇಷ್ಟೊಂದು ದೊಡ್ಡ ಪ್ರಮಾದವೆಸಗಿ ಎಂಎಸ್ಐಎಲ್ ಮಳಿಗೆ ತೆರೆಯುವುದರ ಹಿಂದಿರುವ ಕಾರಣವಾದರೂ ಏನು ಅನ್ನೋದು ಇಲ್ಲಿನವರ ಪ್ರಶ್ನೆಯಾಗಿದೆ.
ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ: ಸರ್ಕಾರಕ್ಕೆ ಆದಾಯ ತಂದುಕೊಡುವ ಯಾವುದೇ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಶಿಕ್ಷಣ ಸಂಸ್ಥೆ, ದೇಗುಲಗಳಿರುವ ಸ್ಥಳದಲ್ಲಿ ಎಂಎಸ್ಐಎಲ್ ಬೇಡ ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಗ್ರಾಮದಲ್ಲಿ ಇದೊಂದೇ ಪ್ರೌಢಶಾಲೆಯಿದ್ದು, ಸಮೀಪದಲ್ಲೇ ಕಾಲೇಜು ಸಹ ಇದೆ. ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಓಡಾಟ ನಡೆಸುವ ಪ್ರದೇಶದಲ್ಲಿ ಮದ್ಯದಂಗಡಿ ತೆರೆದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂಎಸ್ಐಎಲ್ ಅನ್ನು ಬೇರೆಡೆಗೆ ನಿರ್ಮಿಸಿ ಅನ್ನೋದು ಗ್ರಾಮಸ್ಥರ ಬೇಡಿಕೆಯಾಗಿದೆ.
ಒಂದು ವೇಳೆ ಜನರ ವಿರೋಧವನ್ನೂ ಲೆಕ್ಕಿಸದೇ ಶಾಲೆಯ ಬಳಿ ಎಂಎಸ್ಐಎಲ್ ಸ್ಥಾಪಿಸಿದ್ದಲ್ಲಿ ಹೈಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆಯನ್ನ ಗ್ರಾಮಸ್ಥರು ನೀಡಿದ್ದಾರೆ. ಒಟ್ಟಾರೆ ಕೆಲವರ ಹಿತಾಸಕ್ತಿಗಾಗಿ ಶಿಕ್ಷಣ ಸಂಸ್ಥೆಯ ಬಳಿ ಮದ್ಯದಂಗಡಿ ಸ್ಥಾಪಿಸುತ್ತಿರುವುದು ಎಷ್ಟು ಸರಿ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.