ಕಾರವಾರ: ಸ್ವಚ್ಛತೆ ಅನ್ನೋದು ಇತ್ತೀಚಿನ ದಿನದಲ್ಲಿ ಕೇವಲ ಗಾಂಧಿ ಜಯಂತಿ ಸೇರಿದಂತೆ ಕೆಲ ಕಾರ್ಯಕ್ರಮದಲ್ಲಿ ತೋರಿಕೆಗೆ ಮಾತ್ರ ಮಾಡುವ ಕಾರ್ಯವಾಗಿದೆ. ಇದರ ನಡುವೆ ಕಡಲ ನಗರಿ ಕಾರವಾರದಲ್ಲಿ ಕಳೆದ 9 ವರ್ಷದಿಂದ ಪಹರೆ ಎನ್ನುವ ಸಂಘಟನೆ ಸ್ವಚ್ಛತೆ ಮಾಡುತ್ತಾ ಬರುವ ಮೂಲಕ ಮಾದರಿ ಸಂಘಟನೆಯಾಗಿದೆ. ಕಾರವಾರದಿಂದ ಸುಮಾರು 15 ಕಿಲೋ ಮೀಟರ್ ದೂರವಿರುವ ಸಮುದ್ರದ ಮಧ್ಯದಲ್ಲಿರುವ ನಡುಗಡ್ಡೆಯಲ್ಲೂ ಸ್ವಚ್ಛತೆ ಮಾಡುವ ಮೂಲಕ ಪಹರೆ ಸಂಘಟನೆ ಗಮನ ಸೆಳೆದಿದೆ.
ಹೀಗೆ ಕಡಲತೀರದ ಪಕ್ಕದಲ್ಲಿರುವ ನಡುಗಡ್ಡೆಯಲ್ಲಿ ಸ್ವಚ್ಛತೆಗೆ ಇಳಿದಿರುವ ತಂಡ ಕಾರವಾರ ಜಿಲ್ಲೆಯಲ್ಲಿನ ಪಹರೆ ಎನ್ನುವ ತಂಡ. ಕಳೆದ 9 ವರ್ಷಗಳಿಂದ ಪ್ರತಿ ವಾರಕ್ಕೆ ಒಂದು ಘಂಟೆಯಂತೆ ಕಾರವಾರ ತಾಲೂಕಿನ ವಿವಿಧ ಭಾಗದಲ್ಲಿ ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತೆಯ ಅರಿವನ್ನ ಜನರಿಗೆ ಮೂಡಿಸುವ ಕಾರ್ಯಕ್ಕೆ ಇಳಿದಿದೆ. ಕಾರವಾರ ನಗರದಿಂದ ಸುಮಾರು 15 ಕಿಲೋ ಮೀಟರ್ ದೂರವಿರುವ ಲೈಟ್ ಹೌಸ್ ಎನ್ನುವ ನಡುಗಡ್ಡೆಯಲ್ಲಿ ಪ್ರವಾಸಿಗರು ತೆರಳಿ ಪ್ಲಾಸ್ಟಿಕ್ ಬಾಟಲ್, ಮಧ್ಯದ ಬಾಟಲ್ಗಳನ್ನು ಎಸೆದು ಹೋಗುತ್ತಿರುವ ಹಿನ್ನಲೆ ನಡುಗಡ್ಡೆಯಲ್ಲೂ ಸ್ವಚ್ಛತೆ ಮಾಡುವುದಕ್ಕೆ ಪಹರೆ ಕಾರ್ಯಕರ್ತರು ಇಂದು ಬೋಟ್ನಲ್ಲಿ ತೆರಳಿದ್ದರು. ಸುಮಾರು 80ಕ್ಕೂ ಹೆಚ್ಚು ಕಾರ್ಯಕರ್ತರು ನಡುಗಡ್ಡೆಗೆ ತೆರಳಿ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕನ್ನು ಸ್ವಚ್ಛ ಮಾಡಿದರು.
ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಪಹರೆ ವೇದಿಕೆ ಕಾರವಾರ ತಾಲೂಕಿನ ವಿವಿಧ ಭಾಗದಲ್ಲಿ ಸ್ವಚ್ಛತೆ ಮಾಡಿದೆ. ಆದರೆ ನಡುಗಡ್ಡೆಯಲ್ಲಿ ಮಾಡಿದ ಸ್ವಚ್ಛತೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. 9ನೇ ವರ್ಷಕ್ಕೆ ಸ್ವಚ್ಛತಾ ಕಾರ್ಯಾಚರಣೆ ಕಾಲಿಟ್ಟ ಹಿನ್ನೆಲೆಯಲ್ಲಿ ಅಂಕೋಲಾದಿಂದ ಗೋಕರ್ಣದವರೆಗೆ ಪಾದಯಾತ್ರೆ ಮಾಡಲಾಗುವುದು ಎಂದರು.
ಪಹರೆ ಸಂಘಟನೆ ಪ್ರತಿ ಶನಿವಾರ ಒಂದು ಘಂಟೆಗಳ ಕಾಲ ಸ್ವಚ್ಛತೆ ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಸರ್ಕಾರಿ ನೌಕರರು, ವಿವಿಧ ಸಂಘಟನೆಯವರು, ಸಾರ್ವಜನಿಕರು ಸೇರಿ ತಂಡವನ್ನು ಕಟ್ಟಿಕೊಂಡು ಸ್ವಚ್ಛತೆ ಮಾಡುತ್ತಾ ಬಂದಿದ್ದು, ಕೇವಲ ನಗರದಲ್ಲಿ ಮಾಡಿದರೆ ಸಾಲದು ಪ್ರವಾಸಿ ತಾಣದಲ್ಲೂ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಲೈಟ್ ಹೌಸ್ನಲ್ಲೂ ಸ್ವಚ್ಛತೆ ಮಾಡಿತು.
ಇನ್ನು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಸ್ವಚ್ಛತೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಪ್ರಕೃತಿಯ ಮಡಿಲಿನಲ್ಲಿರುವ ಲೈಟ್ ಹೌಸ್ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ದೇಶದ ನಾನಾ ಭಾಗದಿಂದ ಪ್ರವಾಸಿಗರು ಬಂದು ಎಂಜಾಯ್ ಮಾಡಿ ತೆರಳುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಲೈಟ್ ಹೌಸ್ ಅಭಿವೃದ್ಧಿಗೆ ಮುಂದಾಗುವ ಮೂಲಕ ಪ್ರವಾಸೋದ್ಯಮ ಬೆಳೆಸಬೇಕು. ಪಹರೆ ವೇದಿಕೆ ಕಳೆದ 9 ವರ್ಷದಿಂದ ಸ್ವಚ್ಛತೆಯನ್ನು ನಿರಂತರವಾಗಿ ಮಾಡುತ್ತ ಬಂದಿರುವುದು ಕಾರವಾರಕ್ಕೆ ಹೆಮ್ಮೆಯ ಸಂಗತಿ. ತಾನು ಕೂಡ ಪಹರೆ ವೇದಿಕೆಯ ಜೊತೆ ಸದಾ ಕೈ ಜೋಡಿಸುತ್ತೇನೆ ಎಂದರು.
ಕಾರವಾರ ತಾಲೂಕಿನಲ್ಲಿರುವ ಲೈಟ್ ಹೌಸ್ ಉತ್ತಮ ಪ್ರವಾಸಿ ತಾಣವಾಗಿದ್ದು, ನಾನಾ ಭಾಗದಿಂದ ಪ್ರವಾಸಕ್ಕೆಂದು ಲೈಟ್ ಹೌಸ್ಗೆ ತೆರಳುತ್ತಾರೆ. ಆದರೆ ಬಂದಂತಹ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲ್ಗಳನ್ನು ಎಸೆದು ಹೋಗುವುದರಿಂದ ನಡುಗಡ್ಡೆ ಪ್ಲಾಸ್ಟಿಕ್ ಮಯವಾಗಿದ್ದು, ಈ ನಿಟ್ಟಿನಲ್ಲಿ ಸ್ವಚ್ಛತೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಪಹರೆ ಮುಂದಾಗಿದೆ. ಜನರು ಸಹ ಈ ಬಗ್ಗೆ ಜಾಗೃತರಾಗಬೇಕು ಎನ್ನುವುದು ಪಹರೆ ಕಾರ್ಯಕರ್ತರ ಅಂಬೋಣ.
ಇದನ್ನೂ ಓದಿ: ಬೆಂಗಳೂರು: 1900 ಕ್ಕೂ ಹೆಚ್ಚು ಸ್ಥಳಗಳಲ್ಲಿ 'ಸ್ವಚ್ಛತಾ ಹೀ ಸೇವಾ ಶ್ರಮದಾನ', 2.5 ಲಕ್ಷಕ್ಕೂ ಹೆಚ್ಚು ಜನ ಭಾಗಿ