ಕಾರವಾರ: ಉತ್ತಮವಾಗಿ ನಡೆಯುತ್ತಿದ್ದ ಶಾಲೆಯೊಂದಕ್ಕೆ ಅನ್ಯ ಭಾಷಿಕ ಮುಖ್ಯ ಶಿಕ್ಷಕರನ್ನು ನೇಮಕ ಮಾಡಿ ಗೊಂದಲ ಸೃಷ್ಟಿಸಿರುವುದನ್ನು ಖಂಡಿಸಿ ಪಾಲಕರು ಹಾಗೂ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿರುವ ಘಟನೆ ಕಾರವಾರದ ಬಿಣಗಾದಲ್ಲಿ ಇಂದು ನಡೆದಿದೆ.
ಇಲ್ಲಿನ ಬಿಣಗಾ ಆದಿತ್ಯಾ ಬಿರ್ಲಾ ಗ್ರಾಸಿಮ್ ಇಂಡಸ್ಟ್ರೀಸ್‌ನ ಬಾಲ ಭವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 400 ವಿದ್ಯಾರ್ಥಿಗಳು ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ರಾಜ್ಯ ಪಠ್ಯ ಕ್ರಮದಂತೆ ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ ಶೇ 90ರಷ್ಟು ಸ್ಥಳೀಯರ ಮಕ್ಕಳಾಗಿದ್ದು, ಉಳಿದವರು ಕಂಪನಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮಕ್ಕಳಾಗಿದ್ದಾರೆ.
ಶಾಲೆಗೆ ಅನ್ಯ ಭಾಷಿಕ ಶಿಕ್ಷಕರನ್ನು ನೇಮಕ ಮಾಡುವುದರಿಂದ ಮಕ್ಕಳ ಕಲಿಕೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅಲ್ಲದೆ ಇಲ್ಲಿ ಓದುತ್ತಿರುವ ಬಹುತೇಕ ಮಕ್ಕಳ ಕುಟುಂಬದವರು ತಮ್ಮ ಮನೆ ಜಮೀನಿಗಳನ್ನು ಕಳೆದುಕೊಂಡಿದ್ದಾರೆ. ಆದರೆ ಕೆಲಸಕ್ಕೆ ಸ್ಥಳೀಯರಿಗೆ ನೀಡದೆ ಅನ್ಯ ರಾಜ್ಯದವರಿಗೆ ನೀಡಿದ ಕಾರಣ ಅವರ ಒತ್ತಡಕ್ಕೆ ಮಣಿದ ಆಡಳಿತ ಮಂಡಳಿ ಈ ರಿತಿ ನಿಲುವು ತಾಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂಪನಿಯ ಘಟಕ ವ್ಯವಸ್ಥಾಪಕ ಪಿ.ಬಿ.ದೀಕ್ಷಿತ್, ದೇಶದಾದ್ಯಂತ ಕಂಪನಿಯ ಅಡಿ 142 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅವೆಲ್ಲವನ್ನೂ ನಿಯಂತ್ರಿಸುವ ವಿಭಾಗವೊಂದಿದೆ. ಆ ವಿಭಾಗದ ಆಡಳಿತ ಮಂಡಳಿ ಅವರ ನಿರ್ಧಾರವನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ. ಇಲ್ಲಿ ಕಂಪನಿಯು ಭವಿಷ್ಯದಲ್ಲಿ ವಿಸ್ತರಿಸಿಕೊಳ್ಳುವುದು ಶಾಲೆಯನ್ನು ಹೊರ ಭಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ಜೊತೆಗೆ, ಕೇಂದ್ರದ ಪಠ್ಯಕ್ರಮವನ್ನು ಅಳವಡಿಸಲು ಚರ್ಚೆ ನಡೆಯುತ್ತಿದೆ. ಇದಕ್ಕೆ ಪಾಲಕರು ಹಾಗೂ ಸ್ಥಳೀಯರು ಸಹಕಾರ ನೀಡಬೇಕು ಎಂದರು.
ಸ್ಥಳೀಯ ಅಭ್ಯರ್ಥಿಯನ್ನೇ ಮುಖ್ಯ ಶಿಕ್ಷಕರನ್ನಾಗಿ ನೇಮಕ ಮಾಡುವ ವಿಚಾರವಾಗಿ ಸ್ಥಳೀಯರು ಒತ್ತಡ ಹೇರಿದ್ದಕ್ಕಾಗಿ ಅಂತಿಮವಾಗಿ ಮಣಿದ ಅವರು, ಈಗಿರುವಂತೆ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಲಾವುದು. ಸ್ಥಳೀಯರ ಸಹಕಾರದಿಂದಲೇ ಶಾಲೆ ನಡೆಯುತ್ತಿದೆ. ಹೀಗಾಗಿ ನಿಮ್ಮ ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಮೇಲಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಮಕ್ಕಳಿಗೆ ಅನುಕೂಲ ಆಗುವಂಥ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.