ಭಟ್ಕಳ(ಉತ್ತರ ಕನ್ನಡ): ರಾಜ್ಯ ಸರ್ಕಾರ ಕ್ವಾರಂಟೈನ್ ಮಾರ್ಗಸೂಚಿ ಬದಲಾಯಿಸಿದ್ದು, ಇನ್ನು ಮುಂದೆ ಹೊರ ರಾಜ್ಯದಿಂದ ಬರುವವರಿಗೆ ಯಾವುದೇ ಸಾಂಸ್ಥಿಕ ಕ್ವಾರಂಟೈನ್ ಅಥವಾ ಹೋಂ ಕ್ವಾರಂಟೈನ್ ಇಲ್ಲ ಎಂದು ಸಹಾಯಕ ಆಯುಕ್ತ ಭರತ್ ಎಸ್ ತಿಳಿಸಿದ್ದಾರೆ.
ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕೋವಿಡ್-19 ಬಗೆಗಿನ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವವರನ್ನು ಜನರು ಬೇರೆ ರೀತಿಯಲ್ಲಿ ನೋಡಬಾರದು. ಈ ಹಿಂದೆ ಇದ್ದಂತೆ, ಕ್ವಾರಂಟೈನ್ನಲ್ಲಿರುವವರ ಪೋಟೋ ಸೇರಿದಂತೆ ತಾಲೂಕಾಡಳಿತಕ್ಕೆ ನೀಡಬೇಕಾದ ಮಾಹಿತಿ ಅನಿವಾರ್ಯವಲ್ಲ ಎಂದು ಸರ್ಕಾರ ಆದೇಶ ನೀಡಿದೆ. ಅದರಂತೆ ಜನರು ಸಹ ಸಹಕಾರ ನೀಡಬೇಕು ಎಂದರು.
ಆದರೆ ಬೇರೆ ದೇಶದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಮತ್ತೆ 7 ದಿನಗಳ ಹೋಂ ಕ್ವಾರಂಟೈನ್ ಇರಲಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದರು. ತಾಲೂಕಿನಲ್ಲಿ ಇನ್ನು ಮುಂದೆ ಮಾಸ್ಕ್ ಧರಿಸದೆ ತಿರುಗಾಡುವವರಿಗೆ ಪೊಲೀಸರು ದಂಡ ವಿಧಿಸಲಿದ್ದು, ಈ ಬಗ್ಗೆಯೂ ಸರ್ಕಾರದಿಂದ ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ ಎಂದರು.