ಕಾರವಾರ: ಉತ್ತರ ಕನ್ನಡದಲ್ಲಿ ಜಿಲ್ಲಾಧಿಕಾರಿ, ಎಸ್ಪಿ, ಸಿಇಒ ಬಿಟ್ಟರೆ ಬೇರೆ ಅಧಿಕಾರಿಗಳೇ ಇಲ್ಲ. ಜಿಲ್ಲೆಯು ಅನಾಥವಾಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಆರೋಪಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು "ಸಾಮಾನ್ಯ ಸಭೆಗಳಲ್ಲಿನ ಚರ್ಚೆಗಳು ಅರ್ಥಪೂರ್ಣವಾಗಿ ನಡೆಯುತ್ತಿಲ್ಲ. ಇದರಿಂದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಜನರನ್ನು ತಲುಪುತ್ತಿಲ್ಲ. ಹಾಗಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ" ಎಂದು ದೂರಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಿದ ಉಳಗಾ-ಕೆರವಡಿ ಸೇತುವೆ, ಗೋಕರ್ಣ-ಮಂಜುಗುಣಿ ಸೇತುವೆ ಅರೆಬರೆಯಾಗಿದೆ. ಪ್ರವಾಸೋದ್ಯಮ ನಿಂತು ಹೋಗಿದೆ. ನಮ್ಮ ಕಾಲದಲ್ಲಿ ನಡೆಯುತ್ತಿದ್ದ ಕರಾವಳಿ ಉತ್ಸವ, ಸ್ಕೂಬಾ, ಕೈಟ್, ವಾಟರ್ ಸ್ಪೋರ್ಟ್ಸ್ ಉತ್ಸವಗಳು ಸಹ ನಡೆಯುತ್ತಿತ್ತು. ಹೋಂ ಸ್ಟೇದವರು ಕಷ್ಟದಲ್ಲಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳು ಆಸಕ್ತಿ ವಹಿಸದ ಕಾರಣ ಹೀಗಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರ ಇದ್ದರೂ ಇಲ್ಲದಂತಾಗಿದೆ. ಬಿಜೆಪಿ ಭ್ರಷ್ಟಾಚಾರ, ದುರಾಡಳಿತದಿಂದಾಗಿ ಜನ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಜೆಡಿಎಸ್ 28 ಸ್ಥಾನ ಗಳಿಸುವುದು ಸಾಧ್ಯವಿಲ್ಲ. ಅದು ಅವರಿಗೂ ಗೊತ್ತಿರುವ ಕಾರಣ ಕಾಂಗ್ರೆಸ್-ಬಿಜೆಪಿಗೆ ಬಹುಮತ ಸಿಗದಿರಲಿ ಎನ್ನುತ್ತಿದ್ದಾರೆ. ಆದರೆ ಅವರ ಉದ್ದೇಶ ಈಡೇರುವುದಿಲ್ಲ ಎಂದರು.
ಪ್ರಧಾನಿ ಭಾಷಣದ ನಿರೀಕ್ಷೆ ಹುಸಿಯಾಗಿದೆ: ಅಂಕೋಲಾಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಜನರಿಗೆ ಏನು ಮಾಡಿದ್ದೇವೆ ಎಂದು ಹೇಳಬೇಕಿತ್ತು. ಏರ್ಪೋರ್ಟ್ ಯಾವಾಗ ಮುಗಿಸುತ್ತೇವೆ, ಪ್ರವಾಸೋದ್ಯಮಕ್ಕೆ ಏನು ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ಅವರ ಭಾಷಣದಲ್ಲಿ ಜಿಲ್ಲೆಗೆ ಏನೂ ದೊರೆಯುವ ಸೂಚನೆ ಕಂಡಿಲ್ಲ. 2014ರಲ್ಲಿ ಪ್ರಧಾನಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅವರು ಹೇಳಿದಂತೆ ಸೃಷ್ಟಿ ಮಾಡಿದ್ದರೇ ಈವರಗೆ 18 ಕೋಟಿ ಉದ್ಯೋಗ ಸೃಷ್ಟಿಯಾಗುತಿತ್ತು. ಆದರೆ ಎಲ್ಲಿ ಉದ್ಯೋಗ ಸಿಕ್ಕಿದೆ ? ಎಂದು ಪ್ರಶ್ನಿಸಿದರು. ಬೆಲೆ ಏರಿಕೆ ಬಗ್ಗೆ ಪ್ರಧಾನಿ ಮಾತಾಡಿಲ್ಲ. ಬಡವರಿಗೆ ಏನು ಮಾಡಿದ್ದೇವೆ ಎಂದು ಹೇಳಬೇಕಿತ್ತು. ಆದರೆ ಅವರ ಸರ್ಕಾರದಲ್ಲಿ ಬಡವರಿಗೆ ಕಾರ್ಯಕ್ರಮಗಳೇ ಇಲ್ಲ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು. ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಸಂಚಾರ, ವಿದ್ಯುತ್ ರಿಯಾಯಿತಿ, ಉಚಿತ ಅಕ್ಕಿ, ಕುಟುಂಬದ ಮಹಿಳೆಗೆ ಆರ್ಥಿಕ ನೆರವು ಸಿಗಲಿದೆ ಎಂದರು.
ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ಮಾಡಿ 4.5 ಎಕರೆ ಪ್ರದೇಶದಲ್ಲಿ ಮನೆ ನಿರ್ಮಿಸಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ ಚುನಾವಣೆ ಕ್ರಿಕೆಟ್ ಇದ್ದ ಹಾಗೆ. ಮಾಜಿ ಸಿಎಂ ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದಾರೆ. ನನಗೆ ದೇವೇಗೌಡರ ಬಗ್ಗೆ ಅಭಿಮಾನ ಇದೆ. ಕುಮಾರಸ್ವಾಮಿ ನನ್ನ ಮಿತ್ರ. ಕಂದಾಯ ಇಲ್ಲವೇ ಅರಣ್ಯ ಯಾವುದೇ ಆದರೂ ಕೂಡ ಒಂದಿಂಚೂ ಅತಿಕ್ರಮಣ ಮಾಡಿಲ್ಲ. ಜೆಡಿಎಸ್ ಅಭ್ಯರ್ಥಿ ಒತ್ತಾಯಕ್ಕೆ ಈ ರೀತಿ ಆಧಾರ ರಹಿತ ಆರೋಪ ಮಾಡಿದ್ದಾರೆ. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದು ಆರ್.ವಿ ದೇಶಪಾಂಡೆ ಆಗ್ರಹಿಸಿದರು.
ಭಜರಂಗ ಬಲಿ ಅಂದರೆ ಹನುಮಾನ. ನಾನು ಹನುಮಂತನ ಭಕ್ತ. ನಾವೇನು ಭಜರಂಗ ಬಲಿ ಎಂಬುದಕ್ಕೆ ಆಕ್ಷೇಪ ಮಾಡಿಲ್ಲ. ಆದರೆ ಯಾವುದೇ ಸಂಘಟನೆಗಳು ಕಾನೂನು ಕೈಗೆ ತೆಗೆದುಕೊಂಡರೆ ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ನಾವು ಕೂಡ ಭಜರಂಗ ಬಲಿ ಎಂದು ಕಾಂಗ್ರೆಸ್‌ಗೆ ಮತ ನೀಡಿ ಎಂದು ಹೇಳುವುದಾಗಿ ಪ್ರಧಾನಿ ಹೇಳಿಕೆಗೆ ಟಾಂಗ್ ನೀಡಿದರು.
ಸತೀಶ್ ಸೈಲ್ ಬೆಂಬಲಿಸಿ: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಬೈತಖೋಲದಲ್ಲಿ ಪ್ರಚಾರ ನಡೆಸಿದ ಆರ್.ವಿ ದೇಶಪಾಂಡೆ ಸೈಲ್ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮೀನುಗಾರರಲ್ಲಿ ಮನವಿ ಮಾಡಿದರು. ಜೆಡಿಎಸ್-ಬಿಜೆಪಿ ಭ್ರಷ್ಟಾಚಾರದ ಮೂಲಕ ಲೂಟಿ ಮಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಜನಸಾಮಾನ್ಯರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಪೂರ್ಣ ಬಹುಮತದ ಸರ್ಕಾರಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಡಿ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ದಿಗಂಬರ ಶೇಟ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನದ ಚರ್ಚೆ ಚುನಾವಣೆ ಬಳಿಕ ಶಿಸ್ತಿನಿಂದ ಆಗಬೇಕಾದ ಪ್ರಕ್ರಿಯೆ: ಆರ್.ವಿ ದೇಶಪಾಂಡೆ