ಶಿರಸಿ: ಕಳೆದ 10-12 ವರ್ಷದಿಂದ ಕದಂಬೋತ್ಸವ ನಡೆಯುತ್ತಿರುವ ಬನವಾಸಿಯ ಮಯೂರವರ್ಮ ವೇದಿಕೆ ಸದ್ಯ ಪಾಳುಬಿದ್ದಿದ್ದು, ಈ ವರ್ಷವಾದರೂ ಹೊಸ ವೇದಿಕೆ ನಿರ್ಮಾಣದ ಪ್ರಯತ್ನ ಆಗಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ವರ್ಷದಿಂದ ವರ್ಷಕ್ಕೆ ಕದಂಬೋತ್ಸವ ವೀಕ್ಷಣೆಗೆ ಜನರ ಆಗಮನ ಹೆಚ್ಚಿದ್ದು, ಕದಂಬೋತ್ಸವ ಮೈದಾನವು ಬಹಳ ವಿಸ್ತಾರವಾಗಿರುವುದರಿಂದ ದೊಡ್ಡ ಮೈದಾನಕ್ಕೆ ವೇದಿಕಯೂ ಚಿಕ್ಕದಾಗಿ ಕಾಣುತ್ತಿದೆ. ಅಲ್ಲದೇ ವೇದಿಕೆ ಹಳೆಯದಾಗಿದ್ದು, ಹಿಂಬದಿ ಭಾಗ ಸೇರಿದಂತೆ ಕೆಲವು ಭಾಗದಲ್ಲಿ ಬಿರುಕು ಬಿಟ್ಟು ಸಂಪೂರ್ಣ ಶಿಥಿಲಗೊಂಡಿದೆ.
ಉತ್ಸವ ಇಲ್ಲದ ಸಂದರ್ಭದಲ್ಲಿ ಮೈದಾನದ ವೇದಿಕೆಯು ಹಲವು ದುರ್ಬಳಕೆಗೂ ಕಾರಣವಾಗುತ್ತಿದೆ. ಕುಡುಕರ ಹಾವಳಿಗೂ ಕೆಲವೊಂದು ಬಾರಿ ವೇದಿಕೆ ಬಳಕೆಯಾಗಿದೆ. ಅಲ್ಲದೇ ಉತ್ಸವ ನಡೆಯುವ ಎರಡು ದಿನಗಳ ಕಾಲ ಲಕ್ಷಾಂತರ ಜನರು ಬರುವುದರಿಂದ ವಿಸ್ತಾರವಾದ ತೆರೆದ ವೇದಿಕೆಯನ್ನು ಮಾಡಿ, ಹೆಚ್ಚು ಗಣ್ಯರು ವೇದಿಕೆಯಲ್ಲಿ ನಿಲ್ಲಲು ಹಾಗೂ ದೊಡ್ಡ ಕಾರ್ಯಕ್ರಮಗಳಿಗೆ ಹೆಚ್ಚು ಕಲಾವಿದರು ಕಾರ್ಯಕ್ರಮ ನಡೆಸಲು ಅವಕಾಶ ಆಗಲಿದೆ ಎಂಬುದು ಕಲಾಸಕ್ತರ ಮಾತಾಗಿದೆ.
ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಚರ್ಚೆ ನಡೆಸಿದ್ದರೂ, ಅಂತಿಮ ರೂಪ ಆಗಿಲ್ಲ. ಈಗಿರುವ ವೇದಿಕೆಯ ಚಾವಣಿ ತೆಗೆದು, ವೇದಿಕೆಯ ಸುತ್ತಲು ಅಗಲಗೊಳಿಸಿ ದೊಡ್ಡದಾಗಿ ಮಾಡಲು ₹10 ಲಕ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಈ ವರ್ಷ ವಿಸ್ತರಣೆ ಮಾಡಿ, ಮುಂದಿನ ವರ್ಷ ಇನ್ನಷ್ಟು ವೇದಿಕೆ ಅಭಿವೃದ್ದಿ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಶಾಸಕ ಹೆಬ್ಬಾರ್ ತಕ್ಷಣ ಈ ನಿಟ್ಟಿನಲ್ಲಿ ತುರ್ತು ನಿರ್ಣಯ ಕೈಗೊಳ್ಳಬೇಕಿದೆ.