ಕಾರವಾರ: ನಗರದ ಚರಂಡಿಯೊಂದರಲ್ಲಿ ಕಿಲೋ ಮೀಟರ್ ಉದ್ದಕ್ಕೂ ಸತ್ತ ಮೀನುಗಳ ರಾಶಿ ತೇಲಿ ಬಂದಿದ್ದು, ಸ್ಥಳೀಯ ನಿವಾಸಿಗಳು ಗಾಬರಿಗೊಂಡ ಘಟನೆ ನಡೆದಿದೆ.
ಕಾರವಾರದ ಬಾಂಡಿಶಿಟ್ಟಾದಿಂದ ಸವಿತಾ ವೃತ್ತದ ರಸ್ತೆಯವರೆಗಿನ ಚರಂಡಿಯಲ್ಲಿ ರಾಶಿ -ರಾಶಿ ಸತ್ತ ಮೀನುಗಳು ತೇಲಿ ಬಂದಿವೆ. ವಿವಿಧ ಜಾತಿಯ ಮರಿ ಮೀನುಗಳು ಇವಾಗಿದ್ದು, ಮೀನುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ತೇಲಿ ಬಂದ ಸತ್ತ ಮೀನುಗಳ ರಾಶಿ ನೋಡಲು ಚರಂಡಿಯ ಅಕ್ಕಪಕ್ಕ ಜನರು ಗುಂಪುಗೂಡಿ ನಿಂತಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಕಡಲಜೀವ ವಿಜ್ಞಾನ ಕೇಂದ್ರದ ಡಾ.ಶಿವಕುಮಾರ್ ಹರಗಿ, ಸಂಶೋಧನಾ ವಿದ್ಯಾರ್ಥಿಗಳು ಸ್ಥಳಕ್ಕೆ ತೆರಳಿ ಚರಂಡಿ ನೀರು ಪರೀಕ್ಷಿಸಿದ್ದಾರೆ. ಈ ವೇಳೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಮೀನುಗಳಿಗೆ ಅಗತ್ಯವಿರುವಷ್ಟು ಇರಲಿಲ್ಲ. ಹೀಗಾಗಿ ಅವು ಸತ್ತಿರಬಹುದು ಎಂದು ತಿಳಿಸಿದರು.
ಶಿರವಾಡ ಬಳಿ ಕೆಲವರು ರಸಾಯನಿಕ ಮಿಶ್ರಿತ ನೀರನ್ನು ಚರಂಡಿಗೆ ಬಿಟ್ಟಿದ್ದಾರೆ. ಹೀಗಾಗಿ ಮೀನುಗಳು ಸತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸತ್ತ ಮೀನುಗಳು ಯಾವೂ ಕೂಡ ತಿನ್ನಲು ಯೋಗ್ಯವಾಗಿರಲಿಲ್ಲ ಎನ್ನಲಾಗಿದೆ. ಕಾಳಿ ನದಿ ಹಿನ್ನೀರು ಪ್ರದೇಶದಿಂದ ಈ ಮೀನುಗಳು ಚರಂಡಿಗೆ ಬಂದಿರಬಹುದು ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಶಂಕಿಸಿದ್ದಾರೆ.