ಪಂಚಕುಲ (ಹರಿಯಾಣ): ಕೌಟುಂಬಿಕ ಕಲಹಕ್ಕೋ, ದಂಪತಿ ನಡುವಿನ ಭಿನ್ನಾಪ್ರಾಯಕ್ಕೋ ಅಥವಾ ಇನ್ನಿತರ ಕಾರಣಗಳಿಂದ ಯುವ ಜೋಡಿಗಳು ವಿವಾಹ ವಿಚ್ಛೇದನ ಪಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿರುತ್ತೇವೆ ಮತ್ತು ವರದಿಗಳನ್ನು ಓದಿರುತ್ತೇವೆ. ಆದ್ರೆ ಮದುವೆಯಾಗಿ ಬರೋಬ್ಬರಿ 43 ವರ್ಷಗಳ ಬಳಿಕ ವೃದ್ಧ ದಂಪತಿ ವಿಚ್ಛೇದನ ಪಡೆದಿರೋದು ಮತ್ತು ಇದಕ್ಕಾಗಿ ವೃದ್ಧ ತನ್ನ ಜಮೀನನ್ನು ಮಾರಿರುವ ವಿಚಿತ್ರ ಪ್ರಕರಣ ಹರಿಯಾಣದಲ್ಲಿ ನಡೆದಿದೆ.
ಹೌದು, ಪಂಚಕುಲಲ್ಲಿರುವ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಹೈಕೋರ್ಟ್ನಲ್ಲಿ ವೃದ್ಧ ದಂಪತಿ ವಿಚ್ಛೇದನ ಪಡೆದಿದ್ದು, ವೃದ್ಧೆಗೆ ವಿಚ್ಛೇದನ ಬಳಿಕ ಜೀವನಾಂಶ ಮೊತ್ತವಾಗಿ 3.7 ಕೋಟಿ ರೂಪಾಯಿ ನೀಡಲು ವೃದ್ಧ ಒಪ್ಪಿದ್ದಾರೆ.
ಹರಿಯಾಣದ ಕರ್ನಾಲ್ ಜಿಲ್ಲೆಯ ವೃದ್ಧ ದಂಪತಿ ವಿವಾಹವಾದ 43 ವರ್ಷಗಳ ಬಳಿಕ ವಿಚ್ಛೇದನ ಪಡೆದವರು. ಪತ್ನಿಗೆ 3.7 ಕೋಟಿ ಶಾಶ್ವತ ಜೀವನಾಂಶ ನೀಡಲು ಪತಿ (ವೃದ್ಧ) ಒಪ್ಪಿಗೆ ನೀಡಿದ್ದಾರೆ.
ಹೈಕೋರ್ಟ್ ಮಧ್ಯಸ್ಥಿಕೆ ಮೂಲಕ ನಡೆದ ಈ ಒಪ್ಪಂದದಲ್ಲಿ ಪತಿ ತನ್ನ ಕೃಷಿ ಭೂಮಿ ಮತ್ತು ಬೆಳೆಗಳನ್ನು ಮಾರಾಟ ಮಾಡುವ ಒಪ್ಪಂದದ ಷರತ್ತುಗಳನ್ನು ಪೂರೈಸಿದರು.
18 ವರ್ಷಗಳಿಂದ ಪ್ರತ್ಯೇಕ ವಾಸ: ಮೂಲಗಳ ಪ್ರಕಾರ, 69 ವರ್ಷದ ಪತಿ, 73 ವರ್ಷದ ಪತ್ನಿಯಿಂದ 18 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರಿಬ್ಬರು ಆಗಸ್ಟ್ 27, 1980 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಈ ವೃದ್ಧರ ವೈವಾಹಿಕ ಸಂಬಂಧವು ಕ್ರಮೇಣ ಹದಗೆಟ್ಟಿತು ಮತ್ತು ಅವರು ಮೇ 8, 2006 ರಿಂದಲೇ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು.
ಈ ಹಿಂದೆ ಕರ್ನಾಲ್ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯಲ್ಲಿ, ಪತಿಯು ತನಗೆ ಪತ್ನಿಯಿಂದ ಮಾನಸಿಕ ಕ್ರೌರ್ಯ ಆಗುತ್ತಿದೆ ಎಂದು ಆರೋಪಿಸಿದ್ದರು. ಆದರೆ, ನ್ಯಾಯಾಲಯವು ಜನವರಿ 2013 ರಲ್ಲಿ ಇವರ ವಿಚ್ಛೇದನದ ಮನವಿಯನ್ನು ತಿರಸ್ಕರಿಸಿತ್ತು. ನಂತರ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ನವೆಂಬರ್ 4, 2024 ರಂದು ಕೋರ್ಟ್ ಮಧ್ಯಸ್ಥಿಕೆಯಲ್ಲಿ ವಿಚಾರಣೆಗಳು ಪ್ರಾರಂಭವಾದವು. ಈ ಅವಧಿಯಲ್ಲಿ ಎರಡೂ ಕಡೆಯ ಕಕ್ಷಿದಾರರು ಮತ್ತು ಅವರ ಮಕ್ಕಳು ರೂ. 3.7 ಕೋಟಿ ಜೀವನಾಂಶ ಇತ್ಯರ್ಥದ ಷರತ್ತಿನ ಮೇಲೆ ವಿಚ್ಛೇದನಕ್ಕೆ ಒಪ್ಪಿಕೊಂಡರು.
ಪರಿಹಾರದ ಭಾಗವಾಗಿ, ಪತಿ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದು, 2.16 ಕೋಟಿ ರೂಪಾಯಿಯನ್ನು ಡಿಡಿ ಮೂಲಕ ಮತ್ತು ಹೆಚ್ಚುವರಿಯಾಗಿ 50 ಲಕ್ಷ ರೂಪಾಯಿ ಕ್ಯಾಶ್ಅನ್ನು ಕಬ್ಬು ಮತ್ತು ಇತರ ಬೆಳೆಗಳಿಂದ ಬರುವ ಆದಾಯದಿಂದ ಕೊಡುವುದಾಗಿ ಅಜ್ಜ ಹೇಳಿದ್ದಾರೆ. ಅಲ್ಲದೆ ಗಂಡನ ಮರಣದ ನಂತರ ಅವರ ಆಸ್ತಿಯ ಮೇಲಿನ ಎಲ್ಲಾ ಹಕ್ಕುಗಳನ್ನು ಹೆಂಡತಿ ಮತ್ತು ಮಕ್ಕಳಿಗೆ ಬಿಟ್ಟುಕೊಡಬೇಕೆಂಬ ಒಪ್ಪಂದದ ಷರತ್ತನ್ನು ನ್ಯಾಯಾಲಯ ವಿಧಿಸಿದೆ.
ನ್ಯಾಯಮೂರ್ತಿ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಗಜಿತ್ ಸಿಂಗ್ ಬೇಡಿ ಅವರ ಹೈಕೋರ್ಟ್ ಪೀಠವು ಒಪ್ಪಂದವನ್ನು ಅಂಗೀಕರಿಸುವ ಮೂಲಕ ವೃದ್ಧ ಜೋಡಿಯ ವಿಚ್ಛೇದನದ ಈ ಪ್ರಕ್ರಿಯೆಗೆ ಅಂತಿಮ ಮುದ್ರೆ ಒತ್ತಿದೆ.
ಇದನ್ನೂ ಓದಿ: ಪತಿಯಿಂದ ದೂರವಿದ್ದು, ವೈವಾಹಿಕ ಸುಖಭೋಗಕ್ಕೆ ಅಡ್ಡಿಪಡಿಸುವುದು ಕ್ರೌರ್ಯಕ್ಕೆ ಸಮ: ಹೈಕೋರ್ಟ್