ಕಾರವಾರ: ಗೋಹತ್ಯೆಯನ್ನ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು (Cow slaughter prevention law) ಜಾರಿಗೆ ತಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆ್ಯಕ್ಟಿವ್ ಆಗಿದ್ದ ಪೊಲೀಸರು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಲವು ಗೋವುಗಳನ್ನ ರಕ್ಷಿಸಿದ್ದರು. ಆದರೆ ಜಿಲ್ಲೆಯಲ್ಲಿ ಸಂರಕ್ಷಿಸಿದ ಗೋವುಗಳನ್ನು ಎಲ್ಲಿ ಇರಿಸಬೇಕು ಎನ್ನುವುದೇ ಪೊಲೀಸ್ ಇಲಾಖೆಗೆ ತಲೆ ನೋವಾಗಿದೆ. ಜಿಲ್ಲೆಯಲ್ಲಿ ಗೋ ಶಾಲೆ ಕೊರತೆ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿಯೇ ಗೋವುಗಳನ್ನ ಕಟ್ಟಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಸರ್ಕಾರದಿಂದ ಯಾವುದೇ ಗೋ ಶಾಲೆಗಳೂ ಇಲ್ಲ. ಖಾಸಗಿಯಾಗಿ ಒಂದೆರಡು ಗೋ ಶಾಲೆ ಇದ್ದು, ಹಿಡಿದ ನೂರಾರು ಗೋವುಗಳನ್ನ ಖಾಸಗಿ ಗೋ ಶಾಲೆಗೆ ಸಾಗಿಸಿದ್ದಾರೆ. ಆದರೆ ಇದೀಗ ಆ ಗೋ ಶಾಲೆಗಳು ಸಹ ಭರ್ತಿಯಾಗಿವೆ. ಸದ್ಯ ಗೋ ಸಾಗಣೆ ಪ್ರಕರಣ ದಾಖಲಾಗುತ್ತಿದ್ದರು ಹಿಡಿದ ಹಸುಗಳನ್ನ ಗೋ ಶಾಲೆಗೆ ಸಾಗಿಸಲು ಆಗದೇ ಪೊಲೀಸರೇ ಠಾಣೆ ಬಳಿ ಕಟ್ಟಿ ಹಾಕಿ, ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಟ್ಕಳ, ಮಂಗಳೂರು, ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ನೂರಾರು ಗೋವುಗಳನ್ನ ರಕ್ಷಣೆ ಮಾಡಲಾಗಿದೆ. ಈಗಾಗಲೇ ಹಲವು ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಿಲಾಗಿದೆ. ಆದರೆ ಹಿಡಿದ ಹಸುಗಳನ್ನು ಎಲ್ಲಿ ಸಾಕಬೇಕು ಎನ್ನುವುದೇ ತಲೆನೋವಾಗಿದೆ. ಸರ್ಕಾರ ತಾಲೂಕಿಗೊಂದು ಗೋ ಶಾಲೆ ಸ್ಥಾಪಿಸುವ ಮೂಲಕ ಬಿಡಾಡಿ ದನಗಳ, ಕಸಾಯಿಖಾನೆಗೆ ಹೋಗುತ್ತಿರುವ ಹಸುಗಳ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ಸದ್ಯ ಜಿಲ್ಲೆಯ ಕುಮಟಾ, ಭಟ್ಕಳ, ಗೋಕರ್ಣ, ಪೊಲೀಸ್ ಠಾಣೆಯ ಆವರಣದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನ ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಪ್ರಕರಣಗಳು ದಾಖಲಾದರೇ ರಕ್ಷಿಸಿದ ಗೋವುಗಳನ್ನ ಸಾಕಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಓದಿ: ದೇಶದ ಟಾಪ್ 10 ಪೊಲೀಸ್ ಠಾಣೆಗಳ ಪೈಕಿ ಮಾನವಿ ಪೊಲೀಸ್ ಠಾಣೆಗೆ 5ನೇ ಸ್ಥಾನ