ಕಾರವಾರ: ಲಾಕ್ಡೌನ್ನಿಂದಾಗಿ ಕೆಲಸ ಕಾರ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಉತ್ತರ ಕನ್ನಡ ಜಿಲ್ಲಾಡಳಿತ ವಿಶೇಷ ಬಸ್ಗಳ ಮೂಲಕ ಮನೆಗೆ ಕಳುಹಿಸಿದ್ದು, ರಾಜ್ಯದ ನೂರಾರು ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಕೂಲಿ ಅರಸಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಲಾಕ್ಡೌನ್ ಇನ್ನಿಲ್ಲದ ಸಂಕಷ್ಟ ತಂದಿಟ್ಟಿತ್ತು. ಕಳೆದ ಒಂದೂವರೆ ತಿಂಗಳಿಂದ ಕೆಲಸವೂ ಇಲ್ಲದೆ ಸ್ವಂತ ಊರಿಗೂ ತೆರಳಲಾಗದೆ ಸಂಕಷ್ಟದಲ್ಲಿದ್ದ ಕಾರ್ಮಿಕರು ಹಾಗೂ ಅವರ ಕುಟುಂಬದವರು ಇಂದು ನಿಟ್ಟುಸಿರು ಬಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲಾಡಳಿತ ಸರ್ಕಾರದ ಆದೇಶದಂತೆ ಜಿಲ್ಲೆಯ ಕಾರವಾರ, ಮುರುಡೇಶ್ವರ, ಜೋಯಿಡಾ ಭಾಗಗಗಳಲ್ಲಿ ಲಾಕ್ಡೌನ್ನಿಂದಾಗಿ ಊರಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 242 ವಲಸೆ ಕಾರ್ಮಿಕರನ್ನು ಇಂದು ಒಟ್ಟು 12 ವಿಶೇಷ ಸಾರಿಗೆ ಬಸ್ಗಳ ಮೂಲಕ ಸ್ವಂತ ಊರುಗಳಿಗೆ ಕಳುಹಿಸಿಕೊಟ್ಟಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ಬಸ್ನಲ್ಲಿ 20 ಜನರನ್ನು ಕಳಿಸುತ್ತಿದ್ದು, ಮಾಸ್ಕ್, ನೀರಿನ ಬಾಟಲ್, ಬಿಸ್ಕೆಟ್ ನೀಡಲಾಗಿದೆ.
ಕೇವಲ ರಾಜ್ಯದ ಕಾರ್ಮಿಕರನ್ನು ಮಾತ್ರ ಅವರವರ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದ್ದು, ಕಳುಹಿಸಿದ ಬಳಿಕ ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಿದ್ದೇವೆ ಎಂದು ಕಾರವಾರ ಉಪ ವಿಭಾಗಾಧಿಕಾರಿ ಮಾಹಿತಿ ನೀಡಿದರು.