ಶಿರಸಿ(ಉತ್ತರ ಕನ್ನಡ): ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಕೊರೊನಾ ಭೀತಿಗಿಂತ ಹೆಚ್ಚಿನ ಭಯ ಉಂಟು ಮಾಡಿದ್ದ ಮಂಗನ ಕಾಯಿಲೆ ಮತ್ತೆ ಆತಂಕ ಸೃಷ್ಟಿಸಿದೆ. ಇಲ್ಲಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜೋಗಿನಮಠದಲ್ಲಿ ಮಹಿಳೆಯೊಬ್ಬರಿಗೆ ಮಂಗನ ಕಾಯಿಲೆ ದೃಢಪಟ್ಟಿದೆ.
ಇದರಿಂದ ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಬರೋಬ್ಬರಿ 55ಕ್ಕೆ ಏರಿಕೆಯಾದಂತಾಗಿದೆ. ಕಳೆದ ಕೆಲ ದಿನಗಳಿಂದ ಕಾಣಿಸಿಕೊಂಡಿರದ ಮಂಗನ ಕಾಯಿಲೆ ಈಗ ಮತ್ತೆ ಕಾಡುತ್ತಿರುವ ಪರಿಣಾಮ ಸ್ಥಳೀಯರು ಭಯಭೀತರಾಗಿದ್ದು, ಕೊರೊನಾದಷ್ಟೇ ಪ್ರಾಮುಖ್ಯತೆ ಮಂಗನ ಕಾಯಿಲೆಗೂ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲಿಯವರೆಗೆ ಮಂಗನ ಕಾಯಿಲೆಗೆ ಸಿದ್ದಾಪುರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಜಿಲ್ಲೆಯ ಹೊನ್ನಾವರದಲ್ಲಿಯೂ ಸಹ ಮಂಗನ ಕಾಯಿಲೆ ಭೀತಿ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಮಂಗನ ಕಾಯಿಲೆ ಭೀತಿ ಹೆಚ್ಚಾಗಿದ್ದು, ಶಾಶ್ವತ ಪರಿಹಾರ ಸಿಗಬೇಕಿದೆ.