ಶಿರಸಿ: ಕೆನರಾ ಡಿಸಿಸಿ ಬ್ಯಾಂಕ್ ಗೆ ನಡೆಯಲಿರುವ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದ ಮಾಜಿ ಶಾಸಕ ಸತೀಶ್ ಸೈಲ್ ಅವರ ಎರಡೂ ನಾಮಪತ್ರಗಳು ತಿರಸ್ಕೃತಗೊಂಡಿವೆ. ಸತೀಶ ಸೈಲ್ ಅವರು ನವೆಂಬರ್ 3 ರಂದು ಚುನಾವಣೆಗೆ 2 ನಾಮಪತ್ರ ಸಲ್ಲಿಸಿದ್ದರು.
ಸೈಲ್ ಅವರ ಸೂಚಕರಾಗಿ ಕಾರವಾರದ ಗೋಪಿನಾಥ ನಾಯ್ಕ ಹಾಗೂ ಚೇಂಡಿಯಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಸಹಿ ಹಾಕಿದ್ದರು. ಆದರೆ ಅಕ್ಟೋಬರ್ 30ರಂದೇ ನಾಮಪತ್ರ ಸಲ್ಲಿಸಿದ್ದ ಬ್ಯಾಂಕ್ ನ ನಿಕಟಪೂರ್ವ ನಿರ್ದೇಶಕ ಪ್ರಕಾಶ್ ಗುನಗಿ ಅವರಿಗೆ ಸೂಚಕರಾಗಿ ಇಬ್ಬರು ಸಹಿ ಹಾಕಿದ್ದರು. ಒಬ್ಬನೇ ವ್ಯಕ್ತಿ ಇಬ್ಬರಿಗೆ ಸೂಚಕರಾಗಿ ಸಹಿ ಹಾಕಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಮೊದಲು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಯ ನಾಮಪತ್ರ ಸಿಂಧುಗೊಳಿಸಿ ನಂತರ ಸಲ್ಲಿಸಿದ ಸೈಲ್ ನಾಮಪತ್ರವನ್ನು ತಿರಸ್ಕರಿಸಲಾಗಿದೆ.
ಒಟ್ಟು 36 ಅಭ್ಯರ್ಥಿಗಳ 62 ನಾಮಪತ್ರಗಳನ್ನು ಸಿಂಧುಗೊಳಿಸಲಾಗಿದೆ ಎಂದು ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಆಕೃತಿ ಬನ್ಸಾಲ್ ತಿಳಿಸಿದ್ದಾರೆ.