ಕಾರವಾರ(ಉತ್ತರಕನ್ನಡ): ಇಲ್ಲಿನ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಹಾಯವಾಣಿ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ. ಈ ಮೂಲಕ ಕೊರೊನಾ ಸೋಂಕಿನ ಕುರಿತ ಯಾವುದೇ ಅನುಮಾನ, ಸಲಹೆ ಸೂಚನೆಗಳು ಅಥವಾ ಸೋಂಕಿತರು ಮಾನಸಿಕವಾಗಿ ಕುಗ್ಗಿ ಹೋಗಿದ್ದಲ್ಲಿ, ಈ ಸಹಾಯವಾಣಿಗೆ ಕರೆ ಮಾಡುವ ಮೂಲಕ ಅವರ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ಅವಕಾಶ ಒದಗಿಸಿಕೊಡಲಾಗಿದೆ.
ಕರೆಯನ್ನು ಸ್ವೀಕರಿಸುವ ವೈದ್ಯರು ಸೋಂಕಿತರ ಖಿನ್ನತೆಯನ್ನು ದೂರಮಾಡಿ ಅವರನ್ನ ಮಾನಸಿಕವಾಗಿ ಸದೃಢರಾಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಮೂಲಕ ಕೊರೊನಾ ಸೋಂಕಿತರಿಗೆ ಹಾಗೂ ಸೋಂಕಿನಿಂದ ಗುಣಮುಖರಾದವರಿಗೆ ನೆರವು ಒದಗಿಸುವ ಪ್ರಯತ್ನ ನಡೆಸಲಾಗಿದೆ ಎನ್ನುತ್ತಾರೆ ಕ್ರಿಮ್ಸ್ ನಿರ್ದೇಶಕ ಗಜಾನನ ನಾಯಕ.
ಕಳೆದ ಮೂರು ದಿನಗಳ ಹಿಂದಷ್ಟೇ ಕೋವಿಡ್ ಸಹಾಯವಾಣಿಯನ್ನು ಪ್ರಾರಂಭ ಮಾಡಲಾಗಿದ್ದು, ಇದುವರೆಗೆ ಸುಮಾರು 30ಕ್ಕೂ ಅಧಿಕ ಮಂದಿ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡಿದ್ದಾರೆ. ಕೇವಲ ಕೊರೊನಾ ಪೀಡಿತರು ಮಾತ್ರವಲ್ಲದೇ ಸಾರ್ವಜನಿಕರೂ ಸಹ ಕೊರೊನಾ ಕುರಿತಾದ ಸಲಹೆ, ಸೂಚನೆ ಹಾಗೂ ತಮ್ಮ ಪ್ರಶ್ನೆಗಳನ್ನ ಕೇಳಿ ತಮಗಿರುವ ಸಂಶಯಗಳನ್ನ ಪರಿಹರಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲೂ ಸಹ ಕೊರೊನಾ ಸೋಂಕಿತರನ್ನ ಕೀಳಾಗಿ ಕಾಣುವ ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದಿದ್ದು, ಓರ್ವ ವ್ಯಕ್ತಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಹ ನಡೆದಿದೆ.
ಈ ಹಿನ್ನೆಲೆ ಕೊರೊನಾ ಸೋಂಕಿತರಿಗೆ ನೆರವು ಒದಗಿಸಲು ಸಹಾಯವಾಣಿಯನ್ನ ಪ್ರಾರಂಭಿಸಲಾಗಿದೆ. ಹೆಚ್ಚುತ್ತಿರುವ ಕೊರೊನಾ ನಡುವೆ ಇದೊಂದು ಉತ್ತಮ ಕೆಲಸ ಎನ್ನುತ್ತಾರೆ ಸ್ಥಳೀಯರಾದ ವಿನಾಯಕ ಹರಿಕಂತ್ರ. ಇನ್ನು ಈ ಸಹಾಯವಾಣಿ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಹೋಂ ಐಸೋಲೇಶನ್‌ನಲ್ಲಿರುವವರು ಸಹ ಕರೆ ಮಾಡಿ ಅಗತ್ಯ ಸಲಹೆ, ಸಹಾಯವನ್ನ ಪಡೆದುಕೊಳ್ಳಬಹುದಾಗಿದೆ.