ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಆದರೆ, ಬದಲಾದ ರಾಜಕೀಯ ಸ್ಥಿತಿಯಿಂದ ಇಲ್ಲಿನ ನಾಲ್ಕು ತಾಲೂಕುಗಳು ಅನಾಥವಾಗಿದ್ದು, ಜನರ ಸ್ಥಿತಿ ಗತಿಗಳನ್ನು ಸರ್ಕಾರದವರೆಗೆ ಕೊಂಡೊಯ್ಯುವವರು ಇಲ್ಲದಂತಾಗಿದೆ.
ರಾಜಕೀಯ ಸ್ಥಿತ್ಯಂತರದಿಂದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅನರ್ಹರಾಗಿದ್ದಾರೆ. ಇತ್ತ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕ ಸ್ಥಾನದಿಂದ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇದರಿಂದ ಶಿರಸಿ, ಸಿದ್ಧಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕುಗಳಿಗೆ ಶಾಸಕರೇ ಇಲ್ಲದಂತಾಗಿದೆ. ಇದರಿಂದ ನಿರಾಶ್ರಿತರ ಪರಿಸ್ಥಿತಿ ಕೇಳುವರು ಇಲ್ಲದಂತಾಗಿದೆ. ಆದರೆ, ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ.
ಇನ್ನು ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅಧಿಕಾರ ಕಳೆದುಕೊಂಡು ಹಳಿಯಾಳಕ್ಕೆ ಮಾತ್ರ ಶಾಸಕರಾಗಿ ಉಳಿದಿದ್ದಾರೆ.
ಸಂಸದ ಅನಂತ ಕುಮಾರ ಹೆಗಡೆ ಆಯ್ಕೆಯಾದ ಬಳಿಕ ಕ್ಷೇತ್ರದಿಂದ ಕಾಣೆಯಾಗಿದ್ದಾರೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಪ್ರವಾಹ ಪರೀಶೀಲನೆಗೆ ಶಾಸಕರು ಮುಂದಾಗಿದ್ದು, ಸಂತೋಷದ ಸಂಗತಿ ಆದರೂ ಈ ತಾಲೂಕುಗಳನ್ನು ಕೇಳೋರು ಯಾರೂ ಇಲ್ಲ ಎನ್ನುವಂತಾಗಿದೆ.
ಜನಪ್ರತಿನಿಧಿಗಳ ಈ ದಿವ್ಯ ನಿರ್ಲಕ್ಯವನ್ನು ನಾಗರಿಕರು ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಆಕ್ರೋಶ ಹೊರಹಾಕಲಾಗಿದೆ. ಅಲ್ಲದೇ ಸರ್ಕಾರ ಮುತುವರ್ಜಿ ವಹಿಸಿ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.