ಉತ್ತರ ಕನ್ನಡ (ಭಟ್ಕಳ): ಮಡಗಾಂವ್ನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಹೊನ್ನಾವರದ ರಾಮನಗರ ಟೊಂಕ ನಿವಾಸಿ ಸೂರ್ಯಕೃಷ್ಣ ತಾಂಡೇಲ್ ಎಂದು ಗುರುತಿಸಲಾಗಿದೆ. ಈತನಿಂದ 19.5 ಲೀಟರ್ ಮದ್ಯ ಜಪ್ತಿ ಮಾಡಲಾಗಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಭಟ್ಕಳದ ಆರ್.ಪಿ.ಎಫ್ ಉಪ ನಿರೀಕ್ಷಕ ಶಿಶುಪಾಲ್ ಸಿಂಗ್, ಅಬಕಾರಿ ಉಪ ನಿರೀಕ್ಷಕರಾದ ಜೆ.ಎಲ್.ಬೋರ್ಕರ್, ರೇಷ್ಮಾ ವಿ. ಬಾನಾವಳಿಕರ್, ಗಜಾನನ ನಾಯ್ಕ, ಅಬಕಾರಿ ರಕ್ಷಕ ವೆಂಕಟರಮಣ ಮೊಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.