ಉತ್ತರಕನ್ನಡ (ಶಿರಸಿ): ಬಡವರಿಗೆ ಸೂರು ಕಲ್ಪಿಸಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅನುದಾನ ನೀಡುತ್ತಿದ್ದರೂ ಶಿರಸಿ ನಗರ ವ್ಯಾಪ್ತಿಯ ನೂರಾರು ವಸತಿ ರಹಿತರ ಸ್ವಂತ ಸೂರಿನ ಕನಸು ‘ನಿವೇಶನ ಕೊರತೆ’ಯ ಕಾರಣಕ್ಕೆ ನನಸಾಗಿಲ್ಲ. ಇದರಿಂದ ವಿಧಾನಸಭಾಧ್ಯಕ್ಷರ ತವರಲ್ಲೇ ಯೋಜನೆ ಇದ್ದರೂ ಬಡವರಿಗೆ ಸೂರು ಸಿಗದಂತಾಗಿದೆ.
ನಗರ ವ್ಯಾಪ್ತಿಯ ಬಡವರಿಗೆ ಮನೆ ನಿರ್ಮಿಸಲು 2015–16ರಲ್ಲಿ ವಾಜಪೇಯಿ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆ ಜಾರಿಗೆ ತರಲಾಗಿತ್ತು. ಪರಿಶಿಷ್ಟ ವರ್ಗದವರಿಗೆ ಅಂಬೇಡ್ಕರ್ ವಸತಿ ಯೋಜನೆ ಅಡಿ ಮತ್ತು ಉಳಿದ ವರ್ಗದ ಜನರಿಗೆ ವಾಜಪೇಯಿ ವಸತಿ ಯೋಜನೆ ಅಡಿ ಮನೆ ನಿರ್ಮಾಣಕ್ಕೆ ಧನ ಸಹಾಯ ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು.
ಆದರೆ, ಈ ಯೋಜನೆಯ ಅಡಿ ಶಿರಸಿ ನಗರ ವ್ಯಾಪ್ತಿಯಲ್ಲಿ ಈವರೆಗೆ ಕೇವಲ 217 ಮಂದಿ ಮಾತ್ರ ಸೌಲಭ್ಯ ಪಡೆದುಕೊಂಡಿದ್ದಾರೆ. ಯೋಜನೆಗೆ ಮಂಜೂರಾತಿ ಪಡೆಯಲು ಅರ್ಜಿ ಸಲ್ಲಿಸಿದ ಸಾವಿರಾರು ಜನರು ಮನೆ ಮಂಜೂರಾಗುವ ನಿರೀಕ್ಷೆಯಲ್ಲಿ ವರ್ಷಗಳಿಂದ ಕಾಯುತ್ತಿದ್ದಾರೆ.
ವಸತಿ ಯೋಜನೆ ನಿಯಮಾವಳಿ ಪ್ರಕಾರ, ಮನೆ ಮಂಜೂರಾತಿಗೆ ಅರ್ಜಿದಾರ ಸ್ವಂತ ಭೂಮಿ ಹೊಂದಿರಬೇಕು ಎಂಬ ನಿಯಮಾವಳಿ ಇದೆ. ನಗರಸಭೆ ನಡೆಸಿದ ಸಮೀಕ್ಷೆ ವೇಳೆ ಸಾವಿರಕ್ಕೂ ಹೆಚ್ಚು ಜನರು ನಿವೇಶನ ಹೊಂದಿಲ್ಲ. ಇದರಿಂದಾಗಿ ಮನೆ ಮಂಜೂರು ಮಾಡಲು ಅಡ್ಡಿಯಾಗಿದೆ. ಅಲ್ಲದೇ ಹೊರಗಡೆ ಜಾಗ ಖರೀದಿಸಲು ಸರ್ಕಾರದ ನಿಯಮ ಅಡ್ಡಿಯಾಗುತ್ತಿದ್ದು, ಸರ್ಕಾರಿ ದರದಲ್ಲಿ ಜಾಗ ನೀಡಲು ಯಾರೂ ಮುಂದಾಗುತ್ತಿಲ್ಲ.
ಇದರಿಂದ ಸರ್ಕಾರ ನಿಯಮ ಸರಳೀಕರಣ ಮಾಡಬೇಕಾದ ಅಗತ್ಯವಿದ್ದು, ಬಡವರಿಗಾಗಿ ಹೆಚ್ಚಿನ ಮೊತ್ತ ನೀಡಿಯಾದರೂ ಜಮೀನು ಖರೀದಿಸಬೇಕಿದೆ. ಈ ಕುರಿತು ನಗರಸಭೆಯಿಂದ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ.
ಒಟ್ಟಾರೆಯಾಗಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ವಸತಿ ಯೋಜನೆಯಾಗಿದೆ. ಸರ್ಕಾರ ನೀಡಿದರೂ ಜಾಗದ ಕೊರತೆಯಿಂದ ಬಡವರಿಗೆ ಇದು ತಲುಪುತ್ತಿಲ್ಲ. ಕಾರಣ ಸರ್ಕಾರ, ಸ್ಥಳೀಯ ಆಡಳಿತ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದ್ದು, ಶೀಘ್ರವಾಗಿ ಬಡವರಿಗೆ ನಿವೇಶನ ನೀಡಿ ಅವರಿಗೊಂದು ಸೂರು ಕಲ್ಪಿಸಬೇಕಿದೆ.
ಓದಿ: ಕೋಲಾರದಲ್ಲಿ ಒತ್ತುವರಿ ತೆರವು ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ