ಶಿರಸಿ: ರಾಜ್ಯದಲ್ಲೇ ಮೊದಲ ಬಾರಿಗೆ ಸಂಸ್ಥೆಯೊಂದು ಜನರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆ ನೀಡಲು ಮುಂದಾಗಿದೆ.
ತಾಲೂಕಿನ ಸ್ಕೊಡ್ವೆಸ್ ಸಂಸ್ಥೆಯು ಟೀಂ ಸಂಜೀವಿನಿ ಎಂಬ ವಿನೂತನ ಸಂಚಾರಿ ಆರೋಗ್ಯ ಘಟಕ ಪ್ರಾರಂಭಿಸಿದ್ದು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಟೀಂ ಸಂಜೀವಿನಿಯಲ್ಲಿ 5 ಬೈಕ್, 3 ಆಂಬುಲೆನ್ಸ್ಗಳಿದ್ದು, ಪ್ರತೀ ಬೈಕ್ನಲ್ಲೂ ಔಷಧ ಕಿಟ್ಗಳನ್ನು ಅಳವಡಿಸಲಾಗಿದೆ. ಲಾಕ್ಡೌನ್ ವೇಳೆ ಆಸ್ಪತ್ರೆಗೆ ಹೋಗಲಾಗದ ಜನರಿಗಾಗಿ ಸಹಾಯವಾಣಿ ಕೂಡಾ ಲಭ್ಯವಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರಿಗೆ ಕರೆ ಮಾಡಿ ಹೆಸರು ನೋಂದಾಯಿಸಿದರೆ ಟೀಂ ಸಂಜೀವಿನಿಯ ಸದ್ಯಸ್ಯರು ನೇರವಾಗಿ ಮನೆಗೆ ಭೇಟಿ ನೀಡಿ ಸೇವೆ ಒದಗಿಸಲಿದ್ದಾರೆ. ಟೀಂ ಸಂಜೀವಿನಿಯಲ್ಲಿ ವೈದ್ಯರು, ನರ್ಸ್ಗಳು, ಫಾರ್ಮಸಿಸ್ಟ್ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಆರೋಗ್ಯ ಸಹಾಯಕರು ಹಾಗೂ ಸ್ವಯಂ ಸೇವಕರು ಇದ್ದಾರೆ.
ಸಂಜೀವಿನಿ ತಂಡದವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಜೊತೆಗೆ ಕೋವಿಡ್-19 ನಿಯಂತ್ರಣ ಕುರಿತು ಜಾಗೃತಿ ಮೂಡಿಸಿ, ತೀವ್ರ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಗೆ ಸಾಗಿಸಲು ಕೂಡಾ ಸಹಾಯ ಮಾಡುತ್ತಾರೆ. ಜೊತೆಗೆ ದೂರವಾಣಿ ಮೂಲಕ ತಜ್ಞ ವೈದ್ಯರಿಂದ ಸಲಹೆ ನೀಡಲಾಗುತ್ತಿದ್ದು, ಈ ಎಲ್ಲಾ ಸೇವೆಗಳು ಸಂಪೂರ್ಣ ಉಚಿತವಾಗಿವೆ.