ಉತ್ತರ ಕನ್ನಡ/ ಶಿರಸಿ: ಕಳೆದ ಐದು ದಿನಗಳಿಂದ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗ್ತಿದ್ದು ಯಲ್ಲಾಪುರದ ಬೇಡ್ತಿ ನದಿ ಉಕ್ಕಿ ಹರಿಯುತ್ತಿದೆ. ನದಿಗೆ ಇರುವ ಸೇತುವೆಯ ಸುರಕ್ಷತೆ ಕಂಬಗಳು ಮುರಿದು ಬಿದ್ದಿದ್ದು, ಸೇತುವೆಯೂ ಶಿಥಿಲಗೊಂಡಿದೆ.
ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ 93ರಲ್ಲಿ ಸಿಗುವ ಉತ್ತರ ಕನ್ನಡದ ಮಂಚಿಕೇರಿ ಬಳಿ ಇರುವ ಬೇಡ್ತಿ ಸೇತುವೆ ಸುರಕ್ಷತಾ ಕಂಬಗಳು ಮಲೆನಾಡಿನ ಭೀಕರ ಮಳೆಗೆ ಮುರಿದು ಬಿದ್ದು, ಸಂಚಾರ ಬಂದ್ ಆಗಿದೆ. ಇದರಿಂದ ಯಲ್ಲಾಪುರ ಶಿರಸಿ ಸಂಪರ್ಕ ಕಡಿದಂತಾಗಿದೆ. ದಶಕಗಳ ಹಿಂದಿನಿಂದ ಶಿಥಿಲಾವಸ್ಥೆಯಲ್ಲಿರುವ ಸೇತುವೆ ಮೇಲೆ ವಾಹನ ಸಂಚಾರದಿಂದಾಗಿ ಸೇತುವೆ ಸಂಪೂರ್ಣ ಕುಸಿಯಬಹುದು ಎಂಬ ಆತಂಕವನ್ನ ಪ್ರಯಾಣಿಕರು ಹಾಗೂ ಚಾಲಕರು ವ್ಯಕ್ತಪಡಿಸಿದ್ದಾರೆ. ಶಿರಸಿ-ಯಲ್ಲಾಪುರ ಮಾರ್ಗಕ್ಕೆ ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀವೃಷ್ಟಿಯಿಂದ ನೂರಾರು ಕೋಟಿ ಹಾನಿಯಾಗಿದ್ದು, ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳ ಪೈಕಿ ಉತ್ತರಕನ್ನಡ ಜಿಲ್ಲೆ ಕೂಡ ಸೇರಿಕೊಂಡಿದೆ. ಇಲ್ಲಿಯೂ ಸಹ ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಹೆಬ್ಬಾರ್ ಒತ್ತಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ತಂಡ ಕಳುಹಿಸಿ ಅಧ್ಯಯನ ನಡೆಸುವಂತೆ ಹೆಬ್ಬಾರ್ ಪ್ರಧಾನಿಗಳಿಗೂ ಮನವಿ ಮಾಡಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಫೋನ್ ಮಾಡಿಯೂ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.